ಬಿಸಿಸಿಐ ಸಭೆಗೆ ಶಿವಲಾಲ್ ನೇತೃತ್ವ
ಮುಂಬೈ: ಭಾರತದ ಮಾಜಿ ಟೆಸ್ಟ್ ಆಫ್ಸ್ಪಿನ್ನರ್ ಶಿವ್ಲಾಲ್ ಯಾದವ್ ಅವರು ಭಾನುವಾರ ನಡೆಯಲಿರುವ ಬಿಸಿಸಿಐ ತುರ್ತು ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಐಪಿಎಲ್ ಹೊರತಾದ ವಿಷ್ಯಗಳಿಗೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸುಪ್ರೀಂ ಕೋರ್ಟ್ ಶಿವಲಾಲ್ ಯಾದವ್ ಹೆಸರನ್ನು ಸೂಚಿಸಿದ್ದರಿಂದ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಶುಕ್ರವಾರ ಪ್ರಕಟವಾದ ಬಿಸಿಸಿಐ ಹೇಳಿಕೆಯಲ್ಲಿ ಶಿವಲಾಲ್ ಯಾದವ್, ಭಾನುವಾರ ನಡೆಯಲಿರುವ ಸಭೆಗೆ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಬಿಸಿಸಿಐ ವೆಬ್ಸೈಟ್ನಲ್ಲಿ ಸುನಿಲ್ ಗಾವಸ್ಕರ್ ಅವರು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಶಿವಲಾಲ್, ಅವರು ದುಬೈನಲ್ಲಿ ಐಪಿಎಲ್ ಆಯೋಜನೆಯಲ್ಲಿ ನಿರತರಾಗಿರುವುದರಿಂದ ಸಭೆಯಲ್ಲಿ ಭಾಗವಹಿಸುವರೊ ಅಥವಾ ಇಲ್ಲವೊ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಗಾಗಿ ಸಭೆಯ ಅಧ್ಯಕ್ಷತೆಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.