ಹುರುಪಿನಲ್ಲಿ ಆರ್‌ಸಿಬಿ ಚಿಂತೆಯಲ್ಲಿ ಮುಂಬೈ
ದುಬೈ: ಐಪಿಎಲ್-7ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿಯೇ ಗೆಲವು ದಾಖಲಿಸಿ ಭರ್ಜರಿ ಆರಂಭ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ತಮ್ಮ ಮುಂದಿನ ಪಂದ್ಯದಲ್ಲೂ ಈ ಯಶಸ್ವಿ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುವ ಆತ್ಮವಿಶ್ವಾಸದಲ್ಲಿದ್ದಾರೆ.
ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡದ ಆಟಗಾರರು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಗುರುವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ 8 ವಿಕೆಟ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಅಮೋಘ ಗೆಲವು ದಾಖಲಿಸಿ ಶುಭಾರಂಭ ಮಾಡಿತು. ಬಾಂಗ್ಲಾದೇಶದಲ್ಲಿ ನಡೆದ ವಿಶ್ವಕಪ್ ಟಿ-20 ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟ್ ಮಾಡಿದ್ದರಿಂದ ತೀವ್ರ ಟೀಕೆಗೆ ಒಳಗಾಗಿದ್ದ ಯುವರಾಜ್ ಸಿಂಗ್, ಇಲ್ಲಿ ಮಾತ್ರ ಸ್ಫೋಟಿಸುವುದರೊಂದಿಗೆ ಆರ್‌ಸಿಬಿಗೆ ಸುಲಭ ಗೆಲವು ತಂದುಕೊಟ್ಟರು. ಈ ಪಂದ್ಯದಲ್ಲಿ ಅವರು ಕೇವಲ 29 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಒಳಗೊಂಡ ಅಜೇಯ 52 ರನ್ ಸಿಡಿಸಿದ್ದರು. ಮಧ್ಯಮ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿಗೆ (ಅಜೇಯ 49) ಉತ್ತಮ ಸಾಥ್ ನೀಡಿದ ಯುವರಾಜ್, ಮುರಿಯದ ಮೂರನೇ ವಿಕೆಟ್‌ನ ಈ ಜೊತೆಯಾಟದಲ್ಲಿ ಕೇವಲ 7.9 ಓವರುಗಳಲ್ಲಿ 84 ರನ್ ಪೇರಿಸಲು ನೆರವಾದರು. ಇದರೊಂದಿಗೆ ಯುವರಾಜ್ ಈ ಬಾರಿ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಮಾಲೀಕ ವಿಜಯ್ ಮಲ್ಯ ಅವರು ತಮಗೆ ಅತಿ ಹೆಚ್ಚು 14 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿದಂತಾಯಿತು. ಆ ಮೂಲಕ ಅದಕ್ಕೆ ತಕ್ಕ ನ್ಯಾಯ ಒದಗಿಸಿದಂತಾಗಿದೆ. ಆದರೆ, ಮುಂದಿನ ಪಂದ್ಯಗಳಲ್ಲೂ ಅವರು ತಮ್ಮ ಕೋಟಿ ಮೌಲ್ಯವನ್ನು ಸಮರ್ಥಿಸಿಕೊಳ್ಳಬೇಕಾದರೆ, ಸ್ಥಿರ ಪ್ರದರ್ಶನ ನೀಡಿ ತಂಡವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದು ಬಹಳ ಮುಖ್ಯವಾಗಿದೆ.
ಬೆನ್ನು ನೋವಿನಿಂದ ಬಳಲುತ್ತಿರುವ ಕ್ರಿಸ್ ಗೇಯ್ಲ್ ಅವರನ್ನು ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಆದರೂ ಅವರ ಅನುಪಸ್ಥಿತಿ ತಂಡದ ಮೇಲೆ ಪರಿಣಾಮ ಬೀರಲಿಲ್ಲ. ನಾಳಿನ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಸ್ಪಷ್ಟವಾಗಿಲ್ಲ. ಮೊದಲ ಪಂದ್ಯದಲ್ಲಿ ಗೆದ್ದ ತಂಡವನ್ನು ಮುಂದುವರಿಸಿಕೊಂಡು ಹೋಗುವ ಸಾಧ್ಯತೆಯೇ ಹೆಚ್ಚಾಗಿದೆ.
ನಾಯಕ ಕೊಹ್ಲಿ ಮತ್ತು ಯುವರಾಜ್ ಹೊರತಾಗಿ, ಪಾರ್ಥಿವ್ ಪಟೇಲ್ ಮತ್ತು ವಿದೇಶಿ ಆಟಗಾರರಾದ ಡಿವಿಲಿಯರ್ಸ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿನ್ಸನ್, ಅಲ್ಬಿ ಮಾರ್ಕೆಲ್ ಮೊದಲ ಪಂದ್ಯದಲ್ಲಿ ಉತ್ತಮ ಲಯ ತೋರಿದ್ದಾರೆ. ಬೌಲಿಂಗ್‌ನಲ್ಲಿ ವರುಣ್ ಏರಾನ್, ಅಶೋಕ್ ದಿಂಡಾ, ಯುಜವೇಂದ್ರ ಚಾಹಲ್‌ರಂತಹ ಭರವಸೆ ದಾಳಿಕಾರರು ಇರುವುದು ಆರ್‌ಸಿಬಿ ಆತ್ಮವಿಶ್ವಾಸ ಹೆಚ್ಚಿದೆ.
ಮತ್ತೊಂದೆಡೆ ಹಾಲಿ ಚಾಂಪಿಯನ್ ಹೆಗ್ಗಳಿಕೆ ಹೊಂದಿರುವ ಮುಂಬೈ ಇಂಡಿಯನ್ಸ್ ಪ್ರಸಕ್ತ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲೇ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋತು ಆಘಾತಕಾರಿ ಆರಂಭ ಪಡೆದಿದೆ. ತಂಡದ ಪ್ರದರ್ಶನದಿಂದ ಕೋಚ್ ಜಾನ್ ರೈಟ್ ಹಾಗೂ ಮಾರ್ಗದರ್ಶಕ ಸಚಿನ್ ತೆಂಡೂಲ್ಕರ್ ಸ್ವಲ್ಪ ಚಿಂತಿತರಾಗಿದ್ದಾರೆ.
ನಾಯಕ ರೋಹಿತ್ ಶರ್ಮಾ, ಅಂಬಟಿ ರಾಯುಡು, ಜಹೀರ್ ಖಾನ್, ಹರ್‌ಭಜನ್ ಸಿಂಗ್, ಪ್ರಗ್ಯಾನ್ ಓಜಾ ಮತ್ತು ವಿದೇಶಿ ಆಟಗಾರರಾದ ಮೈಕ್ ಹಸ್ಸಿ, ಕೀರನ್ ಪೊಲಾರ್ಡ್, ಕೋರೆ ಆ್ಯಂಡರ್ಸನ್ ಮತ್ತು ಲಸಿತ್ ಮಾಲಿಂಗ ಅವರು ಮುಂಬೈ ತಂಡದ ಶಕ್ತಿಯಾಗಿದ್ದಾರೆ. ನಾಳಿನ ತಮ್ಮ ಎರಡನೇ ಪಂದ್ಯದಲ್ಲಿ ಆರ್‌ಸಿಬಿಯನ್ನು ಸೋಲಿಸಿ ಮೈಕೊಡವಿ ಮೇಲೆದ್ದು ಬರುವ ವಿಶ್ವಾಸದಲ್ಲಿ ಮುಂಬೈ ಆಟಗಾರರಿದ್ದಾರೆ.