ಚೈನೀಸ್ ಜೀಪಿ: ಲೂಯಿಸ್ ಹ್ಯಾಮಿಲ್ಟನ್ಗೆ ಪೋಲ್ ಪೊಸಿಷನ್
ಶಾಂಘೈ: ಪ್ರಸಕ್ತ ಸಾಲಿನಲ್ಲಿ ಉತ್ತಮ ಲಯದಲ್ಲಿ ಸಾಗುತ್ತಿರುವ ಮರ್ಸಿಡೀಸ್ ಚಾಲಕ ಲೂಯಿಸ್ ಹ್ಯಾಮಿಲ್ಟನ್, ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಚೈನೀಸ್ ಗ್ರ್ಯಾನ್ ಪ್ರೀ ರೇಸ್ನಲ್ಲಿ ಪೋಲ್ ಪೊಸಿಷನ್ ಪಡೆದಿದ್ದಾರೆ.
ಶನಿವಾರ ನಡೆದ ಅಹರ್ತಾ ರೇಸ್ನಲ್ಲಿ ಪೋಲ್ ಪೊಸಿಷನ್ ಪಡೆದಿರುವ ಹ್ಯಾಮಿಲ್ಟನ್, ಭಾನುವಾರ ನಡೆಯಲಿರುವ ಪ್ರಮುಖ ರೇಸ್ನಲ್ಲಿ ಅಗ್ರ ಕ್ರಮಾಂಕದಲ್ಲಿ ರೇಸ್ ಆರಂಭಿಸಲಿದ್ದಾರೆ. ಈ ಮೂಲಕ ಹ್ಯಾಮಿಲ್ಟನ್ ಪ್ರಸಕ್ತ ಸಾಲಿನಲ್ಲಿ ನಾಲ್ಕು ರೇಸ್ಗಳಲ್ಲಿ 3 ಬಾರಿ ಪೋಲ್ ಪೊಸಿಷನ್ ಪಡೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ ರೆಡ್ಬುಲ್ ಚಾಲಕರಾದ ಡೇನಿಯಲ್ ರಿಕಾರ್ಡೊ ಹಾಗೂ ಸೆಬಾಸ್ಟಿಯನ್ ವೆಟಲ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು.
ರೇಸ್ ವೇಳೆ ನಿರಂತರವಾಗಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಟ್ರ್ಯಾಕ್ ಮೇಲೆ ಕಾರುಗಳು ಸ್ವಲ್ಪ ಜಾರುತ್ತಿದ್ದವು. ರೆಡ್ಬುಲ್ ತಂಡದ ಚಾಲಕರಿಂದ ತೀವ್ರ ಪೈಪೋಟಿ ಎದುರಾದರೂ ಹ್ಯಾಮಿಲ್ಟನ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಇದು ಹ್ಯಾಮಿಲ್ಟನ್ ವೃತ್ತಿ ಜೀವನದಲ್ಲಿ 34ನೇ ಪೋಲ್ ಪೊಸಿಷನ್ ಆಗಿದೆ. ಸಹರಾ ಫೋರ್ಸ್ ಇಂಡಿಯಾದ ಚಾಲಕ ನಿಕೊ ಹಲ್ಕನ್ಬರ್ಗ್ 8ನೇ ಸ್ಥಾನ ಪಡೆದಿದ್ದಾರೆ.