ಮುಂಬೈ ಚಾಲೆಂಜ್ ಗೆದ್ದ ಚಾಲೆಂಜರ್ಸ್
ಐಪಿಎಲ್ ಟಿ-20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಪರಾಭವಗೊಳಿಸಿತು.
ದುಬೈ: ಮುಂಬೈ ಇಂಡಿಯನ್ಸ್ ಒಡ್ಡಿದ್ದ ಸಾಧಾರಣ ಗುರಿ ಬೆಂಬತ್ತುವಲ್ಲಿ ಆರಂಭದಲ್ಲೇ ದೊಡ್ಡ ಸಂಕಷ್ಟ ಮೈಮೇಲೆ ಎಳೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಂತರದಲ್ಲಿ ಪಾರ್ಥಿವ್ ಪಟೇಲ್ ಮತ್ತು ಎಬಿ ಡಿವಿಲಿಯರ್ಸ್ ನೆರವಿನಿಂದ ಸಾವರಿಸಿಕೊಂಡು ಮೇಲೆದ್ದು ವಿಜಯದ ಕಹಳೆ ಮೊಳಗಿಸಿದೆ.
ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಐಪಿಎಲ್ ಟಿ-20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಪರಾಭವಗೊಳಿಸಿತು.
ಇದರೊಂದಿಗೆ ಆರ್ಸಿಬಿ ಸತತ ಎರಡನೇ ಗೆಲವು ದಾಖಲಿಸುವ ಮೂಲಕ ತನ್ನ ಯಶಸ್ವಿ ಪಯಣವನ್ನು ಮುಂದುವರಿಸಿದೆ. ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪರಾಜಯ ಅನುಭವಿಸಿದ್ದ ಮುಂಬೈ, ಇಲ್ಲಿಯೂ ಸೋಲಿನ ಸರಪಳಿ ಕಳಚಿಕೊಳ್ಳಲಾಗದೇ ಸತತ ಎರಡನೇ ಮುಖಭಂಗಕ್ಕೆ ಒಳಗಾಯಿತು.
ಟಾಸ್ ಗೆದ್ದ ಆರ್ಸಿಬಿ ತಂಡ ಮುಂಬೈ ಇಂಡಿಯನ್ಸ್ನ್ನು ಬ್ಯಾಟಿಂಗ್ಗೆ ಆಮಂತ್ರಿಸಿತು. ಈ ಅವಕಾಶವನ್ನು ಬಳಸಿಕೊಳ್ಳದ ಮುಂಬೈ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಂಬಟಿ ರಾಯುಡು 37 ಎಸೆತಗಳಲ್ಲಿ 1 ಬೌಂಡರಿ ಒಳಗೊಂಡ 35 ರನ್ಗಳಿಸಿದ್ದೇ ಮುಂಬೈ ಪರ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.
ಒಂದು ಹಂತದಲ್ಲಿ 11.2 ಓವರುಗಳಲ್ಲಿ 4 ವಿಕೆಟ್ಗೆ 70 ರನ್ಗಳಿಸಿದ್ದ ಮುಂಬೈ ಪಡೆ ಮತ್ತೆ ಖಾತೆಗೆ 45 ರನ್ ಸೇರಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಅದರಲ್ಲೂ 101ರ ಮೊತ್ತದಲ್ಲಿಯೇ ರಾಯುಡು, ಕೋರೆ ಆ್ಯಂಡರ್ಸನ್ ಮತ್ತು ಜಹೀರ್ ಖಾನ್ ಈ ಮೂರು ವಿಕೆಟ್ಗಳು ಉರುಳಿದವು. ಇನಿಂಗ್ಸ್ ಆರಂಭಿಸಿದ ಮೈಕ್ ಹಸ್ಸಿ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆದಿತ್ಯ ತಾರೆ ತಮಗೆ ದೊರೆತ ಜೀವದಾನದ ಲಾಭ ಪಡೆಯಲು ವಿಫಲರಾದರು. ಇನಿಂಗ್ಸ್ನ ಮೊದಲ ಓವರಿನಲ್ಲಿಯೇ ಹಸ್ಸಿ 1 ರನ್ಗಳಿಸಿದಾಗ ಸ್ಟಾರ್ಕ್ ಬೌಲಿಂಗ್ನಲ್ಲಿ ಹಾಗೂ ಎರಡನೇ ಓವರಿನಲ್ಲಿ ಅಲ್ಬಿ ಮಾರ್ಕೆಲ್ ದಾಳಿಯಲ್ಲಿ ತಾರೆ 1 ರನ್ಗಳಿಸಿದ್ದಾಗಲೇ ನೀಡಿದ್ದ ಕ್ಯಾಚ್ ಅನ್ನು ಆರ್ಸಿಬಿ ಕ್ಷೇತ್ರರಕ್ಷಕರು ನೆಲಕ್ಕೆ ಹಾಕಿದ್ದರು. ಆದರೆ, ಇದರಿಂದ ಮುಂಬೈಗೆ ಹೆಚ್ಚಿನ ಲಾಭವೇನೂ ಆಗಲಿಲ್ಲ.
ಆರ್ಸಿಬಿ ಬೌಲರ್ಗಳು ಪ್ರಾರಂಭದಿಂದಲೇ ಶಿಸ್ತುಬದ್ಧ ದಾಳಿ ಸಂಘಟಿಸುವ ಮೂಲಕ ಮುಂಬೈ ಆಟಗಾರರಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಎದುರಾಳಿ ಬೌಲರ್ಗಳು ಉತ್ತಮ ಲೈನ್ ಅಂಡ್ ಲೆಂಗ್ತ್ ದಾಳಿ ಸಂಘಟಿಸುವ ಮೂಲಕ ಬ್ಯಾಟ್ಸ್ಮನ್ಗಳನ್ನು ಹಿಡಿದಿಡುವಲ್ಲಿ ಆರ್ಸಿಬಿ ಯಶಸ್ವಿಯಾಯಿತು.
ಮಿಚೆಲ್ ಸ್ಟಾರ್ಕ್, ವರುಣ್ ಏರಾನ್ ಮತ್ತು ಯುಜವೇಂದ್ರ ಚಾಹಲ್ ತಲಾ 2 ವಿಕೆಟ್ ಕಬಳಿಸಿದರು. ಉಳಿದಂತೆ ಅಶೋಕ್ ದಿಂಡಾ 4 ಓವರುಗಳ ಕೋಟಾದಲ್ಲಿ ಕೇವಲ 14 ರನ್ ನೀಡಿ 1 ವಿಕೆಟ್ ಪಡೆದರು.
ಆರ್ಸಿಬಿಗೆ ಪಾರ್ಥಿವ್-ಡಿವಿಲಿಯರ್ಸ್ ಆಸರೆ
116 ರನ್ಗಳ ಸಾಧಾರಣ ಗುರಿ ಬೆಂಬತ್ತಿದ ಆರ್ಸಿಬಿ ಇನ್ನೂ 2.3 ಓವರುಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ವಿಜಯೋತ್ಸವ ಆಚರಿಸಿತು.
ಬೆಂಗಳೂರು ತಂಡಕ್ಕೆ ಶುರುವಿನಲ್ಲಿಯೇ ಒಂದರ ಮೇಲೊಂದರಂತೆ ಮೂರು ಆಘಾತಗಳು ಉಂಟಾದಾಗ ಸೋಲಿನ ಭೀತಿ ಆವರಿಸಿತ್ತು. 17 ರನ್ಗಳಾಗುವಷ್ಟರಲ್ಲಿ ಆರಂಭಿಕ ನಿಕ್ ಮ್ಯಾಡಿನ್ಸನ್ ಹಾಗೂ ನಂತರದಲ್ಲಿ ಬಂದ ನಾಯಕ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಪೆವಿಲಿಯನ್ ಸೇರುವುದರೊಂದಿಗೆ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟು ತಗುಲಿದಂತಾಯಿತು. ಅದರಲ್ಲೂ ಮೊದಲ ಪಂದ್ಯದ ಗೆಲವಿನ ಹೀರೊಗಳಾದ ಕೊಹ್ಲಿ ಮತ್ತು ಯುವರಾಜ್ ಶೂನ್ಯಕ್ಕೆ ನಿರ್ಗಮಿಸಿದ್ದು, ಆರ್ಸಿಬಿ ಪಾಳಯದಲ್ಲಿ ನಿರಾಸೆಯ ಕಾರ್ಮೋಡ ಕವಿಯುವಂತೆ ಮಾಡಿತು.
ಆದರೆ, ಈ ಹಂತದಲ್ಲಿ ಜೊತೆಯಾದ ಆರಂಭಿಕ ಪಾರ್ಥಿವ್ ಪಟೇಲ್ ಮತ್ತು ಐದನೇ ಕ್ರಮಾಂಕದಲ್ಲಿ ಬಂದ ಎಬಿ ಡಿವಿಲಿಯರ್ಸ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಪ್ರಾರಂಭದಲ್ಲಿ ಎಚ್ಚರಿಕೆಯಿಂದ ಆಡುತ್ತ ವಿಕೆಟ್ ಕಾಯ್ದುಕೊಳ್ಳಲು ಪ್ರಯತ್ನ ಮಾಡಿದ ಈ ಜೋಗಿ ಒಮ್ಮೆ ಉತ್ತಮ ಲಯ ಕಂಡುಕೊಳ್ಳುತ್ತಲೇ ವೇಗವಾಗಿ ರನ್ ಕಲೆಹಾಕತೊಡಗಿದರು. ಪರಿಣಾಮವಾಗಿ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 13.4 ಓವರುಗಳಲ್ಲಿ 99 ರನ್ ಕಲೆಹಾಕುವ ಮೂಲಕ ಆರ್ಸಿಬಿ ಕೊರಳಿಗೆ ಜಯದ ಹಾರ ತೊಡಿಸಿದರು.
ಪಾರ್ಥಿವ್ ಪಟೇಲ್ (ಅಜೇಯ 57, 45 ಎಸೆತ, 7 ಬೌಂಡರಿ) ಅರ್ಧಶತಕ ಸಂಪಾದಿಸಿದರೆ, ಡಿವಿಲಿಯರ್ಸ್ 48 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿದ್ದ ಉಪಯುಕ್ತ 45 ರನ್ಗಳ ಕಾಣಿಕೆ ನೀಡಿದರು. ಆರ್ಸಿಬಿಗೆ ಶುರುವಿನಲ್ಲಿಯೇ ಭಾರಿ ಆಘಾತ ನೀಡಿದ್ದ ಮುಂಬೈ ಬೌಲರ್ಗಳಾದ ಜಹೀರ್ ಖಾನ್ ಮತ್ತು ಲಸಿತ್ ಮಾಲಿಂಗ ತಮ್ಮ ತಂಡಕ್ಕೆ ಗೆಲವು ತಂದುಕೊಡುವ ಭರವಸೆ ಮೂಡಿಸಿದ್ದರು.
ಆದರೆ, ಪಾರ್ಥಿವ್ ಮತ್ತು ಡಿವಿಲಿಯರ್ಸ್ ಜೋಡಿಯನ್ನು ಬೇಗನೆ ಮುರಿಯಲು ಎಲ್ಲ ಬೌಲರ್ಗಳು ವಿಫಲರಾಗುವುದರೊಂದಿಗೆ ಮುಂಬೈ ಪಡೆಯನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 9 ವಿಕೆಟ್ಗೆ 115
ಮೈಕ್ ಹಸ್ಸಿ ಸಿ ಚಾಹಲ್ ಬಿ ಮಾರ್ಕೆಲ್ 16, ಆದಿತ್ಯ ತಾರೆ ಸಿ ಮ್ಯಾಡಿನ್ಸನ್ ಬಿ ಏರಾನ್ 17, ಅಂಬಟಿ ರಾಯುಡು ಸಿ ಡಿವಿಲಿಯರ್ಸ್ ಬಿ ಸ್ಟಾರ್ಕ್ 35, ರೋಹಿತ್ ಶರ್ಮಾ ಲಿ ಡಿವಿಲಿಯರ್ಸ್ ಬಿ ಚಾಹಲ್ 2, ಕೀರನ್ ಪೊಲಾರ್ಡ್ ಸಿ ರಾಣಾ ಬಿ ಚಾಹಲ್ 3, ಕೋರೆ ಆ್ಯಂಡರ್ಸನ್ ಸಿ ಕೊಹ್ಲಿ ಬಿ ಸ್ಟಾರ್ಕ್ 18, ಹರ್ಭಜನ್ ಸಿಂಗ್ ಬಿ ಏರಾನ್ 8, ಜಹೀರ್ ಖಾನ್ ಸಿ ರಾಣಾ ಬಿ ದಿಂಡಾ 0, ಲಸಿತ್ ಮಾಲಿಂಗ ರನೌಟ್ 2, ಪ್ರಗ್ಯಾನ್ ಓಜಾ ಅಜೇಯ 1, ಜಸ್ಪ್ರೀತ್ ಬುಮ್ರಾ ಅಜೇಯ 1
ಇತರೆ: (ಬೈ-1, ಲೆಗ್ಬೈ-3, ವೈ-7, ನೋಬಾಲ್-1) 12.
ವಿಕೆಟ್ ಪತನ: 1-20, 2-52, 3-60, 4-70, 5-101, 6-101, 7-101, 8-110, 9-113.
ಬೌಲಿಂಗ್ ವಿವರ
ಮಿಚೆಲ್ ಸ್ಟಾರ್ಕ್ 4-0-21-2
ಅಲ್ಬಿ ಮಾರ್ಕೆಲ್ 3-0-23-1
ವರುಣ್ ಏರಾನ್ 4-0-30-2
ಯುಜವೇಂದ್ರ ಚಾಹಲ್ 4-0-17-2
ಅಶೋಕ್ ದಿಂಡಾ 4-0-14-1
ಯುವರಾಜ್ ಸಿಂಗ್ 1-0-6-0
ರಾಯಲ್ ಚಾಲೆಂಜರ್ಸ್ ಬೆಂಗಳೂರು 17.3 ಓವರುಗಳಲ್ಲಿ 3 ವಿಕೆಟ್ಗೆ 116
ನಿಕ್ ಮ್ಯಾಡಿನ್ಸನ್ ಬಿ ಮಾಲಿಂಗ 12, ಪಾರ್ಥಿವ್ ಪಟೇಲ್ ಅಜೇಯ 57, ವಿರಾಟ್ ಕೊಹ್ಲಿ ಸಿ ಹರ್ಭಜನ್ ಬಿ ಜಹೀರ್ 0, ಯುವರಾಜ್ ಸಿಂಗ್ ಎಲ್ಬಿ ಬಿ ಜಹೀರ್ 0, ಎಬಿ ಡಿವಿಲಿಯರ್ಸ್ ಅಜೇಯ 45
ಇತರೆ: (ಲೆಗ್ಬೈ-1, ವೈ-1) 2.
ವಿಕೆಟ್ ಪತನ: 1-16, 2-17, 3-17.
ಬೌಲಿಂಗ್ ವಿವರ
ಜಹೀರ್ ಖಾನ್ 4-0-21-2
ಹರ್ಭಜನ್ ಸಿಂಗ್ 4-0-14-0
ಲಸಿತ್ ಮಾಲಿಂಗ 3.3-0-29-1
ಜಸ್ಪ್ರೀತ್ ಬುಮ್ರಾ 2-0-14-0
ಪ್ರಗ್ಯಾನ್ ಓಜಾ 4-0-37-0