ಕ್ವಾರ್ಟರ್‌ಫೈನಲ್‌ಗೆ ಗೌರವ್
ನವದೆಹಲಿ: ಒಂದೆಡೆ ಜ್ವರದಿಂದ ಬಳಲುವಿಕೆ, ಮತ್ತೊಂದೆಡೆ ತಂಡದ ವೈದ್ಯರೂ ಇಲ್ಲದ ಪರಿಸ್ಥಿತಿಯ ನಡುವೆಯೇ ಅತ್ಯುತ್ತಮ ಹೋರಾಟ ನಡೆಸಿದ ಗೌರವ್ ಸೋಲಂಕಿ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಏಷ್ಯನ್ ಬೆಳ್ಳಿ ಪದಕ ವಿಜೇತ ಗೌರವ್ ಸೋಲಂಕಿ 52 ಕೆ.ಜಿ. ವಿಭಾಗದ ಪ್ರಿಕ್ವಾರ್ಟರ್‌ಫೈನಲ್ ಮುಖಾಬಲದಲ್ಲಿ ಐರ್ಲೆಂಡ್‌ನ ವಿಲಿಯಂ ಡೊನೊಗೆ ಅವರನ್ನು 3-0 ಅಂಕಗಳಿಂದ ಮಣಿಸಿ ಮುನ್ನಡೆದರು. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ಆಟಗಾರನಿಗೆ ಚೀನಾದ ಎಲ್.ವಿ. ಪಿಂಗ್ ಅವರ ಸವಾಲು ಎದುರಾಗಲಿದೆ. ಪಿಂಗ್ ಅವರು ತಮ್ಮ ಹದಿನಾರರಘಟ್ಟದ ಪೈಪೋಟಿಯಲ್ಲಿ ಸ್ಪೇನಿನ ಗ್ಯಾಬ್ರಿಯಲ್ ಎಸ್ಕೊಬಾರ್ ಅವರನ್ನು ಪರಾಭವಗೊಳಿಸಿದರು.
ಕಳೆದ ಎರಡು ದಿನಗಳಿಂದ ಸೋಲಂಕಿ ಜ್ವರದಿಂದ ಬಳಲುತ್ತಿದ್ದರು. ತಂಡಕ್ಕೆ ವೈದ್ಯರು ಇಲ್ಲದ ಕಾರಣ, ಚಿಕಿತ್ಸೆಗಾಗಿ ಬೈಲೋರಷ್ಯಾದ ವೈದ್ಯರ ನೆರವು ಪಡೆಯಲಾಯಿತು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟವು ವೈದ್ಯರು ಸೇರಿದಂತೆ ಭಾರತದ ಯಾವುದೇ ಅಧಿಕಾರಿಗೆ ತಂಡದ ಜೊತೆ ಆಗಮಿಸಲು ಅನುಮತಿ ನೀಡಿಲ್ಲವಾದ್ದರಿಂದ ಭಾರತೀಯ ಆಟಗಾರರಿಗೆ ಇಲ್ಲಿ ಸಮಸ್ಯೆ ಉಂಟಾಗಿದೆ.
ಆದರೂ ಸಹ ಸೋಲಂಕಿಯ ಪ್ರದರ್ಶನದ ಮೇಲೆ ಅವರ ಅನಾರೋಗ್ಯ ಯಾವುದೇ ಪರಿಣಾಮ ಬೀರಲಿಲ್ಲ. ಪಂದ್ಯದ ಕೊನೆಯವರೆಗೂ ಎದುರಾಳಿ ವಿರುದ್ಧ ಉತ್ತಮ ಸಂಘರ್ಷ ನಡೆಸಿದ ಅವರು ಅಂತಿಮವಾಗಿ ಗೆಲವು ದಕ್ಕಿಸಿಕೊಂಡು ಎಂಟರಘಟ್ಟ ತಲುಪುವಲ್ಲಿ ಯಶಸ್ವಿಯಾದರು.ಆದರೆ, ಭಾರತದ ಮತ್ತೊಬ್ಬ ಆಟಗಾರ ನೀರಜ್ ಪಾರಸಾರ್ ಸೋಲನುಭವಿಸಿದ್ದಾರೆ. 64 ಕೆ.ಜಿ. ವಿಭಾಗದಲ್ಲಿ ಸೆಣಸಿದ್ದ ಅವರು ಹಂಗರಿಯ ರಿಚರ್ಡ್ ಟಾಥ್ ವಿರುದ್ಧ 1-2 ಅಂಕಗಳಿಂದ ಪರಾಭವಗೊಂಡರು.