ಚೆನ್ನೈ ಸೂಪರ್ ಕಿಂಗ್ಸ್ಗೆ ಡೇರ್ಡೆವಿಲ್ಸ್ ಸವಾಲು
ಅಬುಧಾಬಿ: ಐಪಿಎಲ್ ಏಳರ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ ಭಾರಿ ಆಘಾತಕ್ಕೆ ಒಳಗಾದ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಈಗ ಎರಡನೇ ಪಂದ್ಯದಲ್ಲಿ ಗೆದ್ದೇ ತೀರುವ ಛಲ ಹೊಂದಿದೆ.
ಮತ್ತೊಂದೆಡೆ, ತನ್ನ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದರೂ ಸಹ ಎರಡನೇ ಪಂದ್ಯದಲ್ಲಿ ಗೆಲವಿನ ನಗೆ ಬೀರಿರುವ ಡೆಲ್ಲಿ ಡೇರ್ಡೆವಿಲ್ಸ್ ಈ ಯಶಸ್ಸನ್ನೇ ಮುಂದುವರಿಸಿಕೊಂಡು ಹೋಗುವ ಗುರಿ ಇಟ್ಟುಕೊಂಡಿದೆ.
ಹಾಗಾಗಿ, ಸೋಮವಾರ ಇಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಡೇರ್ಡೆವಿಲ್ಸ್ ತಂಡಗಳ ನಡುವಿನ ಕದನ ಕುತೂಹಲ ಕೆರಳಿಸಿದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಅವಮಾನಕಾರಿ ಸೋಲು ಕಂಡಿತ್ತು. ಚೆನ್ನೈ ತಂಡ ಮೊದಲು ಬ್ಯಾಟ್ 205 ರನ್ಗಳ ಬೃಹತ್ ಮೊತ್ತ ಪೇರಿಸಿದ್ದರೂ ಸಹ ಗೆಲ್ಲಲು ಸಾಧ್ಯವಾಗಲಿಲ್ಲ. ಪಂಜಾಬ್ನ ಗ್ಲೆನ್ ಮ್ಯಾಕ್ಸ್ವೆಲ್ರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಧೂಳೀಪಟವಾಗಿತ್ತು.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಆರಂಭಿಕ ಸಮರದಲ್ಲಿ ಸೋಲನುಭವಿಸಿದ್ದ ಡೆಲ್ಲಿ ಡೇರ್ಡೆವಿಲ್ಸ್, ಶನಿವಾರದ ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಶಿಸ್ತಿನ ಪ್ರದರ್ಶನ ನೀಡಿ ಅಧಿಕಾರಯುತ ಗೆಲವು ದಾಖಲಿಸಿತ್ತು.
ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ ಆರಂಭಿಕ ಆರಂಭಿಕ ಆಟಗಾರರಾದ ಬ್ರೆಂಡನ್ ಮೆಕಲಂ ಮತ್ತು ಡ್ವೈನ್ ಸ್ಮಿತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಈ ಇಬ್ಬರೂ ದಾಂಡಿಗರು ಅರ್ಧಶತಕದ ಆರ್ಭಟ ತೋರಿದ್ದರು. ಉಳಿದಂತೆ, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ, ಡ್ವೈನ್ ಬ್ರಾವೊ, ರವೀಂದ್ರ ಜಡೇಜಾ, ಫಫ್ ಡು ಪ್ಲೆಸಿಸ್, ಅಪರಾಜಿತ್, ಮನ್ಹಾಸ್ ಅವರಂತಹ ಭರವಸೆಯ ದಾಂಡಿಗರು ತಂಡದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆಶಿಶ್ ನೆಹ್ರಾ, ಬ್ರಾವೊ, ಮೊಹಿತ್ ಶರ್ಮಾ, ಪವನ್ ನೇಗಿ, ಈಶ್ವರ್ ಪಾಂಡೆ ಹಾಗೂ ಸ್ಪಿನ್ ಮಾಂತ್ರಿಕರಾದ ಸಾಮುಯೆಲ್ ಬದ್ರಿ, ಅಶ್ವಿನ್, ಜಡೇಜಾ ಅವರು ತಮ್ಮ ದಾಳಿಯಿಂದ ಯಾವುದೇ ಸಂದರ್ಭದಲ್ಲೂ ತಂಡಕ್ಕೆ ಗೆಲವು ದಕ್ಕಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ.
ಅದೇ ರೀತಿ ದಿನೇಶ್ ಕಾರ್ತಿಕ್ ಸಾರಥ್ಯದ ಡೆಲ್ಲಿ ಡೇರ್ಡೆವಿಲ್ಸ್ ಕೂಡ ಎಂತಹುದೇ ಸವಾಲನ್ನು ಮೆಟ್ಟಿನಿಲ್ಲುವಷ್ಟು ಶಕ್ತಿಯುತವಾಗಿದೆ. ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ದಾಖಲಿಸಿದ ಗೆಲವು ಇದಕ್ಕೆ ಸಾಕ್ಷಿ.
ಆದರೆ ಈ ತಂಡದಲ್ಲಿನ ಒಂದು ಬೇಸರದ ಸಂಗತಿಯೆಂದರೆ ಇಂಗ್ಲೆಂಡ್ ಮೂಲದ ಅನುಭವಿ ಬ್ಯಾಟ್ಸ್ಮನ್ ಕೆವಿನ್ ಪೀಟರ್ಸನ್ ಗಾಯದ ಸಮಸ್ಯೆಯಿಂದಾಗಿ ಮೊದಲೆರಡೂ ಪಂದ್ಯಗಳಲ್ಲಿ ಆಡದೇ ಇರುವುದು. ಈ ಪಂದ್ಯದಲ್ಲಿ ಕೂಡ ಪೀಟರ್ಸನ್ ಆಡುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಆದರೂ, ಬ್ಯಾಟಿಂಗ್ನ ಶಕ್ತಿಯಾಗಿರುವ ಕಾರ್ತಿಕ್, ಮುರಳಿ ವಿಜಯ್, ರಾಸ್ ಟೇಲರ್, ಕಿಂಟಾನ್ ಡಿ ಕಾಕ್, ಜೀನ್ ಪಾಲ್ ಡುಮಿನಿ, ಮನೋಜ್ ತಿವಾರಿ, ಮಾಯಾಂಕ್ ಅಗರ್ವಾಲ್, ಸೌರಭ್ ತಿವಾರಿ ಅವರು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಡೆಲ್ಲಿ ಡೇರ್ಡೆವಿಲ್ಸ್ನ್ನು ಆಪತ್ತಿನಿಂದ ಪಾರುಮಾಡಬಲ್ಲರು. ಅದೇ ರೀತಿ ದಾಳಿಯ ವಿಭಾಗದಲ್ಲಿ ಮೊಹಮ್ಮದ್ ಶಮಿ, ನಾಥನ್ ಕೌಲ್ಟರ್ ನೀಲ್, ಜೈದೇವ್ ಉನದ್ಕತ್, ನದೀಂ, ಜಿಮ್ಮಿ ನೀಶಂ, ವೇಯ್ನ್ ಪಾರ್ನೆಲ್, ರಾಹುಲ್ ಶರ್ಮಾ ಅವರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಷ್ಟು ತಾಕತ್ತು ಹೊಂದಿದ್ದಾರೆ.
ಹಾಗಾಗಿ, ಒಂದೆಡೆ ಗಾಯಗೊಂಡ ಹುಲಿಯಂತಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಇನ್ನೊಂದೆಡೆ ಆರಂಭದ ಆಘಾತದಿಂದ ಮೈಕೊಡವಿ ಮೇಲೆದ್ದು ಬಂದಿರುವ ಡೆಲ್ಲಿ ಡೇರ್ಡೆವಿಲ್ಸ್ ನಡುವಿನ ಪೈಪೋಟಿಯಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ನೋಡೋಣ.
ಪಂದ್ಯದ ಸಮಯ: ರಾತ್ರಿ 8 ಗಂಟೆ (ಸ್ಥಳ-ಅಬುಧಾಬಿ)
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು 2 2 0 4 1.168
ಕೋಲ್ಕತಾ ನೈಟ್ ರೈಡರ್ಸ್ 2 1 1 2 0.909
ಕಿಂಗ್ಸ್ ಇಲೆವೆನ್ ಪಂಜಾಬ್ 2 2 0 4 0.740
ರಾಜಸ್ತಾನ್ ರಾಯಲ್ಸ್ 2 1 1 2 - 0.178
ಡೆಲ್ಲಿ ಡೇರ್ಡೆವಿಲ್ಸ್ 2 1 1 2 - 0.610
ಸನ್ರೈಸರ್ಸ್ ಹೈದರಾಬಾದ್ 1 0 1 0 - 0.273
ಚೆನ್ನೈ ಸೂಪರ್ ಕಿಂಗ್ಸ್ 1 0 1 0 - 0.688
ಮುಂಬೈ ಇಂಡಿಯನ್ಸ್ 2 0 2 0 -1,515