ಪ್ರಶಸ್ತಿ ಕಾತರದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್
ಮಾರ್ಗೋವಾ: ಇದೇ ಮೊದಲ ಬಾರಿಗೆ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಗೆ ಪದಾರ್ಪಣೆ ಮಾಡಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕಾತರದಲ್ಲಿದೆ. ತಂಡದ ಕನಸು ನನಸಾಗಬೇಕಾದರೆ, ಡೆಂಪೋ ಫುಟ್ಬಾಲ್ ಕ್ಲಬ್ ವಿರುದ್ಧ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಜಯಿಸಬೇಕಿದೆ. ಬೆಂಗಳೂರು ಫುಟ್ಬಾಲ್ ಕ್ಲಬ್ ಈಗ ಪಂದ್ಯಾವಳಿಯಲ್ಲಿ 22 ಪಂದ್ಯಗಳಿಂದ 41 ಅಂಕಗಳನ್ನು ಗಳಿಸಿಕೊಂಡಿದೆ. ಈಗ ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಅದರಲ್ಲಿ ಒಂದು ಪಂದ್ಯದಲ್ಲಿ ಗೆದ್ದು ಮೂರು ಅಂಕ ಪಡೆಯುವ ಅಗತ್ಯವಿದೆ. ಹೀಗಾಗಿ ಡೆಂಪೋ ವಿರುದ್ಧ ಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಲು ಬಿಎಫ್‌ಸಿ ಎದುರು ನೋಡುತ್ತಿದೆ. ಎರಡನೇ ಸ್ಥಾನದಲ್ಲಿರುವ ಈಸ್ಟ್ ಬೆಂಗಾಲ್ ಪುಣೆ ತಂಡದ ವಿರುದ್ಧ ಜಯ ಸಾಧಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಆದರೆ, ಅದರ ಕನಸು ನನಸಾಗಬೇಕಾದರೆ, ಬೆಂಗಳೂರು ಎಫ್‌ಸಿ ಉಳಿದೆರಡೂ ಪಂದ್ಯಗಳಲ್ಲಿ ಸೋಲಬೇಕಾಗಿದೆ. ಬೆಂಗಳೂರು ತಂಡ ತನ್ನ ಕೊನೆಯ ಪಂದ್ಯದಲ್ಲಿ ಗೋವಾ ಡಿ ಸ್ಪೋರ್ಟಿಗ್ ಕ್ಲಬ್ ವಿರುದ್ಧ ಸೆಣಸಲಿದೆ.ಡೆಂಪೋ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟಾಪ್-5 ಪಟ್ಟಿಯಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದೆ. ಹೀಗಾಗಿ, ಬೆಂಗಳೂರು ಎಫ್‌ಸಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ.'ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ಕಾತರದಲ್ಲಿ ಬೆಂಗಳೂರು ಆಟಗಾರರ ವಿರುದ್ಧ ಸಮರ್ಥ ಹೋರಾಟ ನಡೆಸುವಂತೆ, ಪಂದ್ಯದಲ್ಲಿ ಆಟಗಾರರನ್ನು ಹುರುದುಂಬಿಸುವುದು ನಮ್ಮ ಮುಖ್ಯ ಗುರಿ' ಎಂದು ಡೆಂಪೋ ಕೋಚ್ ಅರ್ಥರ್ ಪಾಪಸ್ ತಿಳಿಸಿದರು. 'ಬೆಂಗಳೂರು ತಂಡ ಈ ಋತುವಿನಲ್ಲಿ ಲೀಗ್‌ನಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಅಲ್ಲದೆ, ಅದ್ಭುತ ಪ್ರದರ್ಶನ ನೀಡುವ ಮೂಲಕ ಉತ್ತಮ ಫಲಿತಾಂಶವನ್ನೂ ಕಂಡುಕೊಳ್ಳುತ್ತಿದೆ. ಇದರೊಂದಿಗೆ ಐ-ಲೀಗ್ ಪಂದ್ಯಾವಳಿಗೆ ಈ ಬಾರಿ ಹೆಚ್ಚಿನ ವೃತ್ತಿಪರತೆಯನ್ನು ತಂದುಕೊಟ್ಟಿದೆ' ಎಂದು ಆಸ್ಟ್ರೇಲಿಯಾ ಮೂಲದ ಅರ್ಥರ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳು ಸಾಲ್ಗಾಂವ್‌ಕರ್ ವಿರುದ್ಧ ಸೋಲನುಭವಿಸಿದ ನಂತರ ಮಮಡನ್ ಸ್ಪೋರ್ಟಿಂಗ್ ಮತ್ತು ಚರ್ಚಿಲ್ ಬ್ರದರ್ಸ್ ವಿರುದ್ಧ ಜಯ ಕಾಣುವುದರೊಂದಿಗೆ ಉತ್ತಮ ಫಲಿತಾಂಶ ಕಂಡುಕೊಂಡಿತ್ತು. ಆದರೆ, ತಮ್ಮ ಪ್ರಮುಖ ಸ್ಟ್ರೈಕರ್ ಟೋಲ್ಜಿ ಒಜ್ಬೇ ಅಲಭ್ಯರಾಗಿರುವುದು ತಂಡಕ್ಕೆ ಆತಂಕ ಉಂಟುಮಾಡಿದೆ. ಇನ್ನೂ ಎರಡು ಪಂದ್ಯಗಳನ್ನು ಉಳಿಸಿಕೊಂಡಿರುವ ಡೆಂಪೋ 22 ಪಂದ್ಯಗಳಿಂದ 32 ಅಂಕಗಳನ್ನು ಹೊಂದಿದೆ.ಋತುವಿನ ಮೊದಲ ಹಂತದ ಪಂದ್ಯಾವಳಿಯಲ್ಲಿ ಬೆಂಗಳೂರು ತಂಡ ತವರಿನಲ್ಲಿ ನಡೆದ ಪಂದ್ಯದಲ್ಲಿ ಡೆಂಪೋ ವಿರುದ್ಧ 3-1 ಅಂತರದಿಂದ ಜಯ ಸಾಧಿಸಿತ್ತು.