ಟಿಟಿಯಲ್ಲಿ ತವರಿಗೆ ಮೊದಲ ಪದಕ ಖಚಿತಪಡಿಸಿದ ಕಮಲ್-ಆಂಥೋಣಿ
ಗ್ಲಾಸ್ಗೋ: ಅನುಭವಿ ಆಟಗಾರರಾದ ಶರತ್ ಕಮಲ್ ಮತ್ತು ಆಂಥೋಣಿ ಅಮಲ್‌ರಾಜ್ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಡುವುದನ್ನು ಈ ಜೋಡಿ ಖಚಿತಪಡಿಸಿದೆ. ಶುಕ್ರವಾರ ನಡೆದ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಶರತ್ ಮತ್ತು ಆಂಥೋಣಿ 11-7, 12-10, 11-3 ಅಂಕಗಳಿಂದ ಸಿಂಗಾಪುರದ ಯಾಂಗ್ ಝೀ ಮತ್ತು ಝಾನ್ ಜಿಯಾನ್ ಅವರನ್ನು ಪರಾಭವಗೊಳಿಸಿ ಚಿನ್ನದ ಬೇಟೆಯ ಸುತ್ತಿಗೆ ಅರ್ಹತೆ ಪಡೆದುಕೊಂಡರು.
ಚಾಂಪಿಯನ್‌ಪಟ್ಟದ ಸೆಣಸಿನಲ್ಲಿ ಭಾರತದ ಜೋಡಿಯು ಸಿಂಗಾಪುರದ ಮತ್ತೊಂದು ಜೋಡಿಯಾದ ಗಾವೊ ನಿಂಗ್ ಮತ್ತು ಲೀ ಹೂ ಅವರ ವಿರುದ್ಧ ಸೆಣಸಲಿದ್ದಾರೆ. ಈ ಮಧ್ಯೆ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್, ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅವರು ನೈಜೀರಿಯಾದ ಸೆಗುನ್ ಟೊರಿಯೋಲಾ ಅವರನ್ನು 11-5, 11-6, 11-7, 11-4ರಿಂದ ಮಣಿಸಿದರು.