ಟೆಸ್ಟ್ ರ್ಯಾಂಕಿಂಗ್: ಪೂಜಾರ, ಕೊಹ್ಲಿ ಕುಸಿತ
ದುಬೈ: ಭಾರತದ ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ ನೂತನ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯ ಬ್ಯಾಟಿಂಗ್ ವಿಭಾಗದಲ್ಲಿ ಕುಸಿತ ಅನುಭವಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಪೂಜಾರ 8ರಿಂದ 10ನೇ ಸ್ಥಾನಕ್ಕೆ ಕುಸಿದಿದ್ದರೆ, ಕೊಹ್ಲಿ 14ರಿಂದ 15ನೇ ಸ್ಥಾನಕ್ಕಿಳಿದಿದ್ದಾರೆ. ಸದ್ಯ ಬ್ಯಾಟಿಂಗ್ ಪಟ್ಟಿಯಲ್ಲಿ ಪೂಜಾರ ಉತ್ತಮ ಸ್ಥಾನ ಹೊಂದಿರುವ ಭಾರತೀಯ ಆಟಗಾರರಾಗಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ 9 ಸ್ಥಾನ ಮೇಲೇರುವುದರೊಂದಿಗೆ ಜೀವನಶ್ರೇಷ್ಠ 26ನೇ ಸ್ಥಾನ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅಗ್ರಸ್ಥಾನದ ಗೌರವ ಹೊಂದಿದ್ದಾರೆ. ಇದೇ ತಂಡದ ಹಶೀಂ ಆಮ್ಲಾ (3ನೇ ಸ್ಥಾನ) ಅಗ್ರ ಮೂರರೊಳಗಿನ ಸ್ಥಾನ ಏರಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್ ಮೊದಲ ಸ್ಥಾನದ ಹೆಗ್ಗಳಿಕೆ ಹೊಂದಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ 25ನೇ ಮತ್ತು ಭುವನೇಶ್ವರ ಕುಮಾರ್ 32ನೇ ಸ್ಥಾನದಲ್ಲಿರುವುದೇ ಉತ್ತಮ ಸಾಧನೆ ಎನಿಸಿದೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲ್ಯಾಂಡರ್ ಮೊದಲಿಗರಾಗಿದ್ದರೆ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಎರಡನೇ ಸ್ಥಾನದಲ್ಲಿದ್ದಾರೆ.