ಬಾಕ್ಸಿಂಗ್ ರಿಂಗ್ನಲ್ಲಿ ಪಿಂಕಿಗೆ ಕಂಚು ಉಂಗುರ
ಗ್ಲಾಸ್ಗೋ: ಭಾರತದ ಭರವಸೆಯ ಪ್ರತಿಭೆ ಪಿಂಕಿ ಜಾಂಗ್ರಾ 20ನೇ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ಬಾಕ್ಸಿಂಗ್ನಲ್ಲಿ ತವರಿಗೆ ಕಂಚಿನ ಪದಕ ಗಳಿಸಿಕೊಟ್ಟಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ 48-51 ಕೆ.ಜಿ. ವಿಭಾಗದ ಬಾಕ್ಸಿಂಗ್ ಸೆಮಿಫೈನಲ್ ಕದನದಲ್ಲಿ ಪಿಂಕಿ ಜಾಂಗ್ರಾ 39-37 ಅಂಕಗಳ ಅಂತರದಲ್ಲಿ ನಾರ್ದರ್ನ್ ಐರ್ಲೆಂಡ್ನ ಮೈಕೆಲಾ ವಾಲ್ಶ್ ಎದುರು ಸೋಲನುಭವಿಸಿದ ಪರಿಣಾಮ ಕಂಚಿನ ಪದಕಕ್ಕೆ ತೃಪ್ತಿ ಹೊಂದಬೇಕಾಯಿತು.
ತಲಾ ಎರಡು ನಿಮಿಷಗಳ ನಾಲ್ಕೂ ಸುತ್ತುಗಳ ಮುಖಾಬಲದಲ್ಲಿ ಪಿಂಕಿ ಅವರನ್ನು ಹಿನ್ನಡೆ ಅನುಭವಿಸುವುದರೊಂದಿಗೆ ಫೈನಲ್ಗೆ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿದರು.
ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ನಲ್ಲಿ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಮೇರಿ ಕೋಮ್ ಅವರನ್ನು ಮಣಿಸಿ ಭಾರತ ಬಾಕ್ಸಿಂಗ್ ತಂಡದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಪಿಂಕಿ, ಸೆಮಿಫೈನಲ್ವರೆಗಿನ ಹಾದಿಯನ್ನು ಸಮರ್ಥವಾಗಿಯೇ ದಾಟಿ ಬಂದಿದ್ದರು.
ಹರಿಯಾಣದ ಮೂಲಕ 24ರ ಮಹಿಳಾ ಬಾಕ್ಸರ್, ರಿಂಗ್ನಲ್ಲಿ ಉತ್ತಮ ರೀತಿಯಲ್ಲಿ ಕಾದಾಟ ನಡೆಸಿದರೂ ಸಹ ಗೆಲ್ಲುವ ಅದೃಷ್ಟ ಮಾತ್ರ ಆಕೆಗೆ ಇರಲಿಲ್ಲ. ಎಂಟು ನಿಮಿಷಗಳ ನಾಲ್ಕು ಸುತ್ತುಗಳ ಹೋರಾಟದ ನಂತರ ಕಜಕಿಸ್ತಾನದ ತೀರ್ಪುಗಾರರು ಉಭಯ ಆಟಗಾರ್ತಿಯರಿಗೆ 38-38 ಅಂಕಗಳನ್ನು ನೀಡಿದ್ದರು. ಆದರೆ, ಕೆನಡಾ ಮತ್ತು ಹಂಗರಿಯ ತೀರ್ಪುಗಾರರು ಮೈಕೆಲಾ ವಾಲ್ಶ್ ಪರ ಕ್ರಮವಾಗಿ 40-36 ಮತ್ತು 39-37 ಅಂಕಗಳನ್ನು ನೀಡಿದ್ದರಿಂದ ಅಂತಿಮವಾಗಿ ಪಿಂಕಿಗೆ ನಿರಾಸೆ ಕಾದಿತ್ತು.
ಪಂದ್ಯದ ಬಳಿಕ ಮಾತನಾಡಿದ ಪಿಂಕಿ ಜಾಂಗ್ರಾ, ಇಂದು ತಮ್ಮ ದಿನವಾಗಿರಲಿಲ್ಲ. ಆದರೆ, ಉತ್ತಮ ಹೋರಾಟಗಾರ್ತಿಯಾಗಿರುವ ಪ್ರತಿಸ್ಪರ್ಧಿ ತಮಗೆ ಕಠಿಣ ಸವಾಲುಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಮೇಲಾಗಿ ತಾವೂ ಕೂಡ ಕೆಲವು ತಪ್ಪುಗಳನ್ನು ಎಸಗಿದ್ದರಿಂದ ಅಂಕಗಳನ್ನು ಕಳೆದುಕೊಳ್ಳಬೇಕಾಯಿತು ಎಂದರು.