ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವನಿತೆಯರಿಗೆ 5ನೇ ಸ್ಥಾನ

Srinivasa Murthy VN
Updated On : 2 Aug 2014, 12:07 pm

ಗ್ಲಾಸ್ಗೋ: ಭಾರತದ ಮಹಿಳೆಯರು 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಐದನೇ ಸ್ಥಾನದ ಗೌರವದೊಂದಿಗೆ ತಮ್ಮ ಅಭಿಯಾನಕ್ಕೆ ತೆರೆ ಎಳೆದುಕೊಂಡಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ವಿಭಾಗದ 5-6ನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಭಾರತದ ವನಿತೆಯರು 2-1 ಗೋಲುಗಳಿಂದ ಆತಿಥೇಯ ಸ್ಕಾಟ್ಲೆಂಡ್ ತಂಡವನ್ನು ಪರಾಭವಗೊಳಿಸಿದರು.  ವಿಜೇತ ಭಾರತ ತಂಡದ ಪರ ಅನುಪಾ ಬಾರ್ಲಾ 53ನೇ ನಿಮಿಷ ಮತ್ತು ಪೂನಂ ರಾಣಿ 57ನೇ ನಿಮಿಷಗಳಲ್ಲಿ ತಲಾ ಒಂದೊಂದು ಗೋಲು ದಾಖಲಿಸಿ ಗೆಲವಿನಲ್ಲಿ ಮಿಂಚಿದರು. ಸ್ಕಾಟ್ಲೆಂಡ್ ಪರ ನಿಕ್ಕಿ ಕಿಡ್ 55ನೇ ನಿಮಿಷ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಒಂದು ಗೋಲು ಗಳಿಸಲು ಶಕ್ತರಾದರು. ಇದರೊಂದಿಗೆ ಭಾರತದ ವನಿತೆಯರು ಸತತ ಎರಡನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಪದಕ ಗೆಲ್ಲುವುದರಿಂದ ವಂಚಿತರಾದರು. ಇದಕ್ಕೂ ಮುನ್ನ ಭಾರತದ ಆಟಗಾರ್ತಿಯರು ಮ್ಯಾಂಚೆಸ್ಟೆರ್‌ನಲ್ಲಿ ನಡೆದ 2002ರ ಕೂಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳಿಗೆ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಎರಡೂ ತಂಡಗಳ ಆಟಗಾರ್ತಿಯರಿಗೆ ಗೋಲು ಗಳಿಸಲು ಕೆಲ ಉತ್ತಮ ಅವಕಾಶಗಳು ಲಭಿಸಿದ್ದರೂ ಸಹ ಗುರಿ ಸೇರುವ ಹಾದಿಯಲ್ಲಿ ನಿರಾಸೆ ಅನುಭವಿಸಿದರು. ಆದರೆ, ಉತ್ತರಾರ್ಧದ ಆಟದಲ್ಲಿ ಕೇವಲ ನಾಲ್ಕು ನಿಮಿಷಗಳ ಅಂತರದಲ್ಲಿಯೇ ಮೂರು ಗೋಲುಗಳು ದಾಖಲಾಗಿ ಪಂದ್ಯದ ಕಾವು ಹೆಚ್ಚಿಸಿತು.
ಮೊದಲಿಗೆ ಭಾರತದ ಪರ ಅನುಪಾ ಬಾರ್ಲಾ ಗೋಲಿನ ಖಾತೆ ತೆರೆ 1-0 ಮುನ್ನಡೆಗೆ ಕಾರಣರಾದರು. ಸಹ ಆಟಗಾರರು ಒದಗಿಸಿಕೊಟ್ಟ ಅವಕಾಶದಲ್ಲಿ ಗೋಲು ಗಳಿಸುವಲ್ಲಿ ಅವರು ಹಿನ್ನಡೆ ಕಾಣಲಿಲ್ಲ. ಆದರೆ, ಈ ಹಿನ್ನಡೆಯಲ್ಲಿ ಸ್ಕಾಟ್ಲೆಂಡ್ ಹೆಚ್ಚು ಸಮಯ ಉಳಿಯದೇ, ನಿಕ್ಕಿ ಕಿಡ್ ದಾಖಲಿಸಿಂದ ಗೋಲಿನ ಸಹಾಯದಿಂದ ಭಾರತದ ಜೊತೆ 1-1 ಸಮಗೌರವ ಸಾಧಿಸಿಯೇ ಬಿಟ್ಟಿತು.
ಇದರಿಂದ ಮತ್ತೆ ಎಚ್ಚೆತ್ತುಕೊಂಡ ಭಾರತದ ವನಿತೆಯರು ಹೋರಾಟ ಮತ್ತಷ್ಟು ತೀವ್ರಗೊಳಿಸಿಕೊಳ್ಳುವ ಮೂಲಕ ಬಹುಬೇಗನೆ ಪುನಃ 2-1 ಗೋಲುಗಳಿಂದ ಮೇಲುಗೈ ಸಾಧಿಸಿತು. ಸ್ಕಾಟ್ಲೆಂಡ್ ಗೋಲ್‌ಕೀಪರ್ ಆಮಿ ಗಿಬ್ಸನ್‌ರ ಕಣ್ತಪ್ಪಿಸಿದ ಪೂನಂ ರಾಣಿ ಭಾರತದ ಪರ ಎರಡನೇ ಗೋಲು ಸಂಪಾದಿಸಿ ಗೆಲವಿಗೆ ಕಾರಣರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement