ಸುಸ್ಥಿತಿಯಲ್ಲಿ ಅಧ್ಯಕ್ಷರ ಇಲೆವೆನ್
ಬೆಂಗಳೂರು: ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಕೆಎಸ್ಸಿಎ ಅಧ್ಯಕ್ಷರ ಎಲೆವೆನ್ ತಂಡ, ಬಂಗಾಳ ಕ್ರಿಕೆಟ್ ಸಂಸ್ಥೆ ವಿರುದ್ಧ ಮೊದಲ ದಿನ ಸುಸ್ಥಿತಿಯಲ್ಲಿ ಉಳಿದುಕೊಂಡಿದೆ.
ಬಂಗಾಳವನ್ನು ಮೊದಲ ಇನಿಂಗ್ಸ್ನಲ್ಲಿ 198 ರನ್ಗಳಿಗೆ ಆಲೌಟ್ ಮಾಡಿದ ಅಧ್ಯಕ್ಷರ ಇಲೆವೆನ್ ತಂಡ, ನಂತರ ಬ್ಯಾಟಿಂಗ್ ಆರಂಭಿಸಿ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ. ಇನ್ನು ಮಳೆಯಿಂದ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಕೆಎಸ್ಸಿಎ ಇಲೆವೆನ್ ತಂಡ ಹರ್ಯಾಣ ವಿರುದ್ಧ ಮೊದಲ ದಿನಾಂತ್ಯಕ್ಕೆ 54 ಓವರ್ಗಳಲ್ಲಿ 5 ವಿಕೆಟ್ಗೆ 188 ರನ್ ಗಳಿಸಿದೆ.
ಮಳೆಯಿಂದ ಬೇಗನೆ ನಿಲ್ಲಿಸಲಾದ ಪಂದ್ಯದಲ್ಲಿ ಕೆಎಸ್ಸಿಎ ಕೊಲ್ಟ್ಸ್ ತಂಡ 32 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ.
ಡಿ. ವೈ ಪಾಟೀಲ್ ಬೃಹತ್ ಮೊತ್ತ: ಬ್ರಾವಿಷ್ ಶೆಟ್ಟಿ (219) ದ್ವಿಶತಕ ದಾಖಲಿಸುವುದರೊಂದಿಗೆ ಪುಣೆಯ ಡಿ. ವೈ ಪಾಟೀಲ್ ತಂಡ ಆಂಧ್ರಪ್ರದೇಶದ ವಿರುದ್ಧ ಮೊದಲ ದಿನ 7 ವಿಕೆಟ್ ಕಳೆದುಕೊಂಡು 467 ರನ್ ದಾಖಲಿಸಿದ್ದು, ಬೃಹತ್ ಮೊತ್ತದತ್ತ ಸಾಗಿದೆ. 212 ಎಸೆತಗಳನ್ನು ಎದುರಿಸಿದ ಬ್ರಾವಿಷ್ ಶೆಟ್ಟಿ ದ್ವಿಶತಕದಲ್ಲಿ 5 ಸಿಕ್ಸರ್ ಮತ್ತು 31 ಬೌಂಡರಿಗಳು ಸೇರಿದ್ದವು.
ಗೋವಾ ಕ್ರಿಕೆಟ್ ಸಂಸ್ಥೆ ಹಿಮಾಚಲಪ್ರದೇಶದ ವಿರುದ್ಧ 64.4 ಓವರ್ಗಳಲ್ಲಿ 199 ರನ್ಗಳಿಗೆ ಆಲೌಟ್ ಆಯಿತು. ನಂತರ ಇನಿಂಗ್ಸ್ ಆರಂಭಿಸಿದ ಹಿಮಾಚಲಪ್ರದೇಶ, ದಿನಾಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ.
ಓಡಿಶಾ ಕ್ರಿಕೆಟ್ ಸಂಸ್ಥೆ ತ್ರಿಪುರಾ ತಂಡದ ವಿರುದ್ಧ 81 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ದಾಖಲಿಸಿದೆ.
ಮುಂಬೈ ಕ್ರಿಕೆಟ್ ಸಂಸ್ಥೆ ದಿನಾಂತ್ಯಕ್ಕೆ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ವಿರುದ್ಧ 53 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ.