ಏಷ್ಯನ್ ಗೇಮ್ಸ್‌ಗೆ ಭಾರತ ಕ್ರಿಕೆಟ್ ತಂಡ ಗೈರು
ಮುಂಬೈ: ಬಿಡುವಿಲ್ಲದ ವೇಳಾಪಟ್ಟಿ ಹಾಗೂ ಏಷ್ಯಾ ಕ್ರಿಕೆಟ್ ಸಮಿತಿಯ ನಿರ್ಲಕ್ಷ್ಯದಿಂದ ಮುಂಬರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ಕ್ರಿಕೆಟ್ ತಂಡ ಭಾಗವಹಿಸದಿರಲು ನಿರ್ಧರಿಸಿದೆ.
2014ರ ಏಷ್ಯನ್ ಕ್ರೀಡಾಕೂಟಕ್ಕೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ತಮ್ಮ ಪುರುಷರ ಹಾಗೂ ಮಹಿಳಾ ತಂಡಗಳನ್ನು ಕಳುಹಿಸುತ್ತಿವೆ. ಇನ್ನು ಪಾಕಿಸ್ತಾನ ಕೇವಲ ಮಹಿಳಾ ತಂಡವನ್ನು ಕಳುಹಿಸಲಿದೆ ಎಂದು ಕ್ರೀಡಾಕೂಟದ ಫೇಸ್‌ಬುಕ್ ಫೇಜ್‌ನಲ್ಲಿ ಪ್ರಕಟಿಸಲಾಗಿದೆ.
ಭಾರತ ಈಗಾಗಲೇ ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಏಷ್ಯಾ ಕ್ರೀಡಾಕೂಟಕ್ಕೆ ತಂಡವನ್ನು ಕಳುಹಿಸದಿರಲು ನಿರ್ಧರಿಸಿದೆ. ಏಷ್ಯಾ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಕಳೆದ ಬಾರಿಯ ಆವೃತ್ತಿಯಿಂದ ಅಳವಡಿಸಿಕೊಂಡಿದ್ದು, ಭಾರತ ಕಳೆದ ಬಾರಿಯೂ ಭಾಗವಹಿಸಿರಲಿಲ್ಲ.
ಈ ಬಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಸೆ.20ರಿಂದ ಅಕ್ಟೋಬರ್ 3ರವರೆಗೆ ಕ್ರಿಕೆಟ್ ಪಂದ್ಯಗಳು ನಡೆಯಲಿವೆ.