ದೇವೇಂದ್ರೊ, ಸರಿತಾಗೆ ರಜತ
ಗ್ಲಾಸ್ಗೋ: ಕಾಮನ್ವೆಲ್ತ್ ಬಾಕ್ಸಿಂಗ್ ವಿಭಾಗದ ಪುರುಷರ 49ಕೆಜಿ ಫೈನಲ್ ಪಂದ್ಯದಲ್ಲಿ ಎಲ್. ದೇವೇಂದ್ರೊ ಸಿಂಗ್ ಮತ್ತು ಮಹಿಳೆಯರ 57-60ಕೆಜಿ ಫೈನಲ್ ಪಂದ್ಯದಲ್ಲಿ ಎಲ್. ಸರಿತಾದೇವಿ ಅವರು ಸೋಲನುಭವಿಸುವ ಮೂಲಕ ಬೆಳ್ಳಿಗೆ ಭಾಜನರಾದರು.
ದೇವೇಂದ್ರೊ ಸಿಂಗ್ ಅವರು ಫೈನಲ್ ಪಂದ್ಯದಲ್ಲಿ ಉತ್ತರ ಐರ್ಲೆಂಡ್‌ನ ಪ್ಯಾಡಿ ಬರ್ನ್ಸ್ ವಿರುದ್ಧ 0-3 ಅಂಕಗಳಿಂದ ಸೋಲನುಭವಿಸಿದರು. ಇನ್ನು ಸರಿತಾದೇವಿ ಅವರು, ಆಸ್ಟ್ರೇಲಿಯಾದ ಶೆಲ್ಲಿ ವಾಟ್ಸ್ ವಿರುದ್ಧ 1-3 ಅಂಕಗಳಿಂದ ಪರಾಭವ ಹೊಂದಿದರು. ಈ ಇಬ್ಬರು ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಕ್ರೀಡಾಕೂಟದಲ್ಲಿ ಭಾರತ 54 ಪದಕಗಳನ್ನು ಗೆದ್ದುಕೊಂಡಿತು.
ದೇವೇಂದ್ರೊ ಸಿಂಗ್ ಸೋಲಿಸಿದ ಪ್ಯಾಡಿ ಬರ್ನ್ಸ್ ಚಿನ್ನದ ಪದಕ ಗೆದ್ದರೆ, ಉಗಾಂಡದ ಫಾಜಿಲ್ ಕಗ್ವಾ ಮತ್ತು ವೇಲ್ಷ್‌ನ ಆ್ಯಶ್ಲಿ ವಿಲಿಯಮ್ಸ್ ಅವರು ಕಂಚಿನ ಪದಕ ಗೆದ್ದುಕೊಂಡರು. ವಿಶ್ವದ ಮಾಜಿ ಚಾಂಪಿಯನ್ ಸರಿತಾ, ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಮೇಲುಗೈ ಸಾಧಿಸಿದ್ದರು. ಆದರೆ, ದ್ವಿತೀಯ ಸುತ್ತು ಆರಂಭವಾದಾಗ ಅವರು ಸಂಪೂರ್ಣ ಶಕ್ತಿ ಕಳೆದುಕೊಂಡವರಂತೆ ಹೋರಾಡಿದರು. ಹೀಗಾಗಿ 32 ವರ್ಷದ ಹಿರಿಯ ಆಟಗಾರ್ತಿ ಕೈಚೆಲಿದರು. ಮುಂದಿನ ಎರಡು ಸುತ್ತುಗಳಲ್ಲಿ ಸಹ ಶೆಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿದರು.
ಇನ್ನು ಮಹಿಳೆಯರ 57-60ಕೆಜಿ ವಿಭಾಗದಲ್ಲಿ ಸರಿತಾದೇವಿ ಸೋಲಿಸಿದ ಶೆಲ್ಲಿ ವಾಟ್ಸ್ ಚಿನ್ನ ಗೆದ್ದರೆ, ಉತ್ತರ ಐರ್ಲೆಂಡ್‌ನ ಅಲನ್ನಾ ಔಡ್ಲೇ-ಮರ್ಫಿ ಮತ್ತು ಮೊಜಾಬಿಕ್ಸ್‌ನ ಮಾಕಾಂಗೂ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.ಇನ್ನು ದೇವೇಂದ್ರೊ ಪುರುಷರ ವಿಭಾಗದಲ್ಲಿ, ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ತಮ್ಮ ಎದುರಾಳಿ ಮೊದಲ ಎರಡೂ ಸುತ್ತುಗಳಲ್ಲೂ ಕೈಚೆಲ್ಲಿದರು. ನಂತರದ ಎರಡು ಸುತ್ತುಗಳಲ್ಲಿ ದೇವೇಂದ್ರೂ ಉತ್ತಮ ಹೋರಾಟ ನಡೆಸಿದರು. ಆದರೆ, ಅಂಕಗಳ ಆಧಾರದಲ್ಲಿ ಬಾರ್ನ್ಸ್ ಅವರು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.