ಫೈನಲ್‌ಗೆ ಕಶ್ಯಪ್
ಗ್ಲಾಸ್ಗೋ: ಅಪಾರ ಭರವಸೆ ಮೂಡಿಸಿರುವ ಶಟ್ಲರ್ ಪರುಪಳ್ಳಿ ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆಯಾಡಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ.
ಎಮಿರೇಟ್ಸ್ ಎರೇನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯ ಸಿಂಗಲ್ಸ್ ವಿಭಾಗದಲ್ಲಿ ಪಿ. ಕಶ್ಯಪ್ ಫೈನಲ್‌ಗೆ ತಲುಪಿದ್ದಾರೆ. ಆ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ.
ವಿಶ್ವದ 22ನೇ ಶ್ರೇಯಾಂಕಿತ ಪಿ. ಕಶ್ಯಪ್ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ರಾಜೀವ್ ಓಸೆಫ್ ಅವರನ್ನು 18-21, 21-17, 21-18 ಅಂಕಗಳಿಂದ ಪರಾಭವಗೊಳಿಸಿದರು.
ಒಂದು ಗಂಟೆ 23 ನಿಮಿಷಗಳವರೆಗೆ ನಡೆದ ಕದನದಲ್ಲಿ ಕಶ್ಯಪ್ ಮೊದಲ ಗೇಮ್ ಸೋತು ಆತಂಕಕ್ಕೆ ಒಳಗಾಗಿದ್ದರು. ಆದರೆ, ಮುಂದಿನ ಎರಡೂ ಗೇಮ್‌ಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡುವ ಮೂಲಕ ರೋಚಕ ಗೆಲವು ತಮ್ಮದಾಗಿಸಿಕೊಂಡರು. ಆದರೆ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ. ಸಿಂಧು ಸೆಮಿಫೈನಲ್‌ನಲ್ಲಿಯೇ ಆಘಾತ ಅನುಭವಿಸಿದರು. ಕೆನಡಾದ ಮಿಚೆಲಿ ಲೀ 22-20, 22-20ರಿಂದ ಸಿಂಧುಗೆ ಸೋಲುಣಿಸಿದರು.
ಫೈನಲ್‌ಗೆ ಜ್ವಾಲಾ-ಅಶ್ವಿನಿ
ಈ ಮಧ್ಯೆ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು ಫೈನಲ್ ತಲುಪಿದ್ದಾರೆ. ಆ ಮೂಲಕ ಪದಕವೊಂದನ್ನು ಖಚಿತಪಡಿಸಿದ್ದಾರೆ. ಇಂದೇ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜ್ವಾಲಾ ಮತ್ತು ಅಶ್ವಿನಿ 21-7, 21-12 ಅಂಕಗಳಿಂದ ಮಲೇಷಿ ಯಾದ ಲಿಮ್ ಮತ್ತು ಜಿಂಗ್ ಅವರನ್ನು ಪರಾಭವಗೊಳಿಸಿದರು.