ಶರತ್-ಆಂಥೋಣಿ ಬೆಳ್ಳಿಗೆ ತೃಪ್ತಿ
ಗ್ಲಾಸ್ಗೋ: ಭಾರತದ ಅಚಂತ ಶರತ್ ಕಮಲ್ ಮತ್ತು ಆಂಥೋಣಿ ಅಮಲ್ರಾಜ್ ಕಾಮನ್ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್ ಸ್ಪರ್ಧೆಯ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಶನಿವಾರ ನಡೆದ ಚಿನ್ನದ ಪದಕಕ್ಕಾಗಿನ ಬೇಟೆಯಲ್ಲಿ ಶರತ್ ಕಮಲ್ ಮತ್ತು ಅಂಥೋಣಿ ಜೋಡಿ 11-8, 7-11, 9-11, 5-11 ಅಂಕಗಳಿಂದ ಸಿಂಗಾಪುರದ ನಿಂಗ್ ಗಾವೊ ಮತ್ತು ಹೂ ಲೀ ಅವರ ಎದುರು ಸೋಲನುಭವಿಸಿ ಎರಡನೇ ಸ್ಥಾನಕ್ಕೆ ಕುಸಿಯಿತು. ಭಾರತದ ಜೋಡಿ ಮೊದಲ ಗೇಮ್ ಗೆದ್ದು ಶುಭಾರಂಭ ಮಾಡಿತಾದರೂ, ಮುಂದಿನ ಮೂರೂ ಗೇಮ್ಗಳಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ಚಿನ್ನದ ಪದಕ ಗೆಲ್ಲುವ ಆಸೆ ಕೈಬಿಡಬೇಕಾಯಿತು.
ಸಿಂಗಲ್ಸ್ನಲ್ಲಿ ಶರತ್ಗೆ ನಿರಾಶೆ
ಆದರೆ, ಸಿಂಗಲ್ಸ್ ವಿಭಾಗದಲ್ಲಿ ಮಾತ್ರ ಶರತ್ ಕಮಲ್ ಫೈನಲ್ ತಲುಪಲು ವಿಫಲರಾಗಿದ್ದಾರೆ. ಇಂದೇ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಗಾಪುರದ ಜೆ. ಝಾನ್ 11-6, 11-6, 11-6, 11-8 ಅಂಕಗಳಿಂದ ಭಾರತೀಯ ಆಟಗಾರನಿಗೆ ಸೋಲುಣಿಸಿದರು.