ಗ್ಲಾಸ್ಗೋದಲ್ಲಿ ಭಾರತಕ್ಕೆ ಮುಜುಗರ
ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟ..
ಗ್ಲಾಸ್ಗೋ: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮುಜುಗರವಾಗುವಂತಹ ಘಟನೆಯೊಂದು ನಡೆದಿದೆ. ಘಟನೆಯಲ್ಲಿ ಬಂಧನಕ್ಕೊಳಗಾದವರು ಭಾರತ ಕ್ರೀಡಾ ಅಧಿಕಾರಿಗಳು ಎಂಬುದು ಮತ್ತೊಂದು ಶೋಚನೀಯ ಸಂಗತಿಯಾಗಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮತ್ತು ಕುಸ್ತಿ ರೆಫ್ರಿ ವೀರೇಂದ್ರ ಮಲಿಕ್ ಅವರೇ, ಕ್ರೀಡಾಕೂಟದಲ್ಲಿ ಬಂಧನಕ್ಕೊಳಗಾದ ಅಧಿಕಾರಿಗಳಾಗಿದ್ದಾರೆ. ಕುಡಿದ ಅಮಲಿನಲ್ಲಿ ಚಾಲನೆ ಮಾಡಿದ್ದಕ್ಕೆ ರಾಜೀವ್ ಮೆಹ್ತಾ ಅವರನ್ನು ಬಂಧಿಸಲಾಗಿದೆ. ಆದರೆ, ಭಾರತ ತಂಡದೊಂದಿಗೆ ತೆರಳದಿರುವ ಮಲಿಕ್ ಅವರು, ಗಂಭೀರವಾದ ಲೈಂಗಿಕ ಕಿರುಕಳ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಇಬ್ಬರನ್ನು ಬಂಧಿಸಿರುವ ಕುರಿತು ಸ್ಕಾಟ್ಲೆಂಡ್ ಯಾರ್ಡ್ ವಕ್ತಾರ ಖಚಿತಪಡಿಸಿದ್ದಾರೆ.
'ಗ್ಲಾಸ್ಗೋದ ಸಿಟಿ ಸೆಂಟರ್‌ನಲ್ಲಿ ಲೈಂಗಿಕ ಕಿರುಕಳ ನೀಡಿದ ವರದಿ ಹಿನ್ನೆಲೆಯಲ್ಲಿ 49 ವರ್ಷದ ಮಲಿಕ್ ಅವರನ್ನು ಆಗಸ್ಟ್ 2ರಂದು ಬಂಧಿಸಲಾಗಿದೆ. ಇನ್ನು 45 ವರ್ಷದ ಮೇಹ್ತಾ ಅವರನ್ನು ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ' ಎಂದು ವಾಕ್ತರ ತಿಳಿಸಿದ್ದಾರೆ. ಬಂಧಿತ ಇಬ್ಬರನ್ನೂ ಸೋಮವಾರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ. ಆದರೆ, ಈ ಇಬ್ಬರು ಕ್ರೀಡಾಕೂಟಕ್ಕೆ ತೆರಳಿರುವ ಭಾರತ ತಂಡದೊಂದಿಗೆ ಕ್ರೀಡಾ ಗ್ರಾಮದಲ್ಲಿ ತಂಗಿರಲಿಲ್ಲವಂತೆ. ಬದಲಾಗಿ ಅಲ್ಲಿನ ಸ್ಥಳೀಯ ಹೋಟೆಲ್ಲೊಂದರಲ್ಲಿ ತಂಗಿದ್ದರಂತೆ.
'ಮಲಿಕ್ ಅವರನ್ನು ಯಾಕೆ ಬಂಧಿಸಲಾಗಿದೆ ಎಂಬ ಬಗ್ಗೆ ನಾನು ಈಗಲೇ ವಿವರವನ್ನು ಬಹಿರಂಗಪಡಿಸಲಾರೆ. ಆದರೆ, ಪ್ರಕರಣದ ಬಗ್ಗೆ ನಮಗೆ ಅರಿವಿದೆ. ಅವರನ್ನು ಬಂಧಿಸಿರುವ ಸ್ಕಾಟ್ಲೆಂಡ್ ಪೊಲೀಸರು ಪ್ರಕರಣದ ವಿಚಾರಣೆ ನಡೆಸುವ ಜವಾಬ್ದಾರಿ ನಿಭಾಯಿಸಲಿದ್ದಾರೆ' ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕ್ ಹೂಪರ್ ತಿಳಿಸಿದ್ದಾರೆ.