ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗ್ಲಾಸ್ಗೋ ಹಬ್ಬಕ್ಕೆ ವೈಭವದ ತೆರೆ

ಸಿಡಿಮದ್ದಿನ ಸದ್ದು ಬಾನಂಗಳದಲ್ಲಿ ಮೂಡಿದ ಬಣ್ಣದ ಚಿತ್ತಾರ, ಕ್ರೀಡಾ ಜಾತ್ರೆಗೆ ಸಾಕ್ಷಿ..

Srinivasa Murthy VN
Updated On : 5 Aug 2014, 1:40 am

ಸಿಡಿಮದ್ದಿನ ಸದ್ದು ಬಾನಂಗಳದಲ್ಲಿ ಮೂಡಿದ ಬಣ್ಣದ ಚಿತ್ತಾರ, ಕ್ರೀಡಾ ಜಾತ್ರೆಗೆ ಸಾಕ್ಷಿಯಾದ ಸ್ಕಾಟ್ಲೆಂಡ್
ಗ್ಲಾಸ್ಗೋ:
ಕಲಾವಿದರ ಪ್ರತಿಭೆ, ಸ್ಕಾಟ್ಲೆಂಡ್‌ನ ಸಾಂಸ್ಕೃತಿಕ ವೈಭವದ ಅನಾವರಣ, ಪಟಾಕಿ ಹಾಗೂ ಜಗಮಗಿಸುವ ಬೆಳಕಿನ ಚಿತ್ತಾರದ ಮೂಲಕ 11 ದಿನಗಳ ಸುದೀರ್ಘ ಕ್ರೀಡಾ ಹಬ್ಬಕ್ಕೆ ಭಾನುವಾರ ರಾತ್ರಿ ಅದ್ಧೂರಿ ತೆರೆ ಬಿದ್ದಿದೆ. 20ನೇ ಕಾಮನ್‌ವೆಲ್ತ್ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದ್ದು, ಕ್ರೀಡಾ ಅಭಿಮಾನಿಗಳಿಗೆ ರೋಚಕ ಕ್ರೀಡೆಯ ಮೂಲಕ ರಸದೌತಣ ಉಣಬಡಿಸಿತು.
ಜು.23ರಂದು ವರ್ಣರಂಜಿತ ಸಮಾರಂಭದ ಮೂಲಕ ಅಭೂತಪೂರ್ವ ಚಾಲನೆ ಪಡೆದ ಕ್ರೀಡಾಕೂಟ, ಯಾವುದೇ ಅಡ್ಡಿ ಆತಂಕ ಎದುರಿಸದೇ ಯಶಸ್ಸು ಸಾಧಿಸಿತು. 71 ರಾಷ್ಟ್ರಗಳ 4,947ಕ್ರೀಡಾಪಟುಗಳು ಭಾಗವಹಿಸಿದ್ದು, ಸ್ಕಾಟ್ಲೆಂಡ್ ಇತಿಹಾಸದಲ್ಲಿ ಅಭೂತಪೂರ್ವ ಕ್ರೀಡಾ ಜಾತ್ರೆಗೆ ಸಾಕ್ಷಿಯಾಯಿತು.
ಕ್ರೀಡಾಕೂಟದ ಅಂತಿಮ ದಿನವಾದ ಭಾನುವಾರ ರಾತ್ರಿ ಹ್ಯಾಂಪ್‌ಡೆನ್ ಪಾರ್ಕ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಲಾವಿದರ ಪ್ರದರ್ಶನ ಪ್ರೇಕ್ಷಕರನ್ನು ಮೂಕವಿಸ್ಮಿತರಾಗುವಂತೆ ಮಾಡಿತು. ಸಿಡಿ ಮದ್ದುಗಳೊಂದಿಗೆ ಬಾನಂಗಳದಲ್ಲಿ ವರ್ಣರಂಜಿತ ಚಿತ್ತಾರ ಬಿಡಿಸುವ ಮೂಲಕ ಮನಮೋಹಕ ಚಿತ್ತಾರಗಳು ಪ್ರೇಕ್ಷಕರ ಕಣ್ಮನ ಸೆಳೆದವು.
ಗಮನಸೆಳೆದ ಗಾಯಕರು: ಸಮಾರೋಪ ಸಮಾರಂಭದಲ್ಲಿ ಗ್ಲಾಸ್ಗೋ ಮೂಲದ ಗಾಯಕಿ ಲುಲು ಹಾಗೂ ಆಸ್ಟ್ರೇಲಿಯಾದ ಕೀಲೆ ಮಿನೊಂಗ್ಯೂ ಅವರು ತಮ್ಮ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ನಂತರ ಮತ್ತೋರ್ವ ಗಾಯಕಿ ರಿಕಿ ರೋಜ್ ಸಹ ಸಮಾರಂಭಕ್ಕೆ ಕಳೆ ಕಟ್ಟಿದರು. ಕ್ರೀಡಾಂಗಣದಲ್ಲಿ ಟ್ರ್ಯಾಕ್ ಸ್ಪರ್ಧೆಗಳು ಮುಕ್ತಾಯವಾದ ನಂತರ ಆಯೋಜಕರು ಕೇವಲ 18 ಗಂಟೆಗಳಲ್ಲಿ ಈ ಕ್ರೀಡಾಂಗಣವನ್ನು ಸಮಾರೋಪ ಸಮಾರಂಭಕ್ಕಾಗಿ ಸಿದ್ಧಪಡಿಸಿದರು.
ಅಪಾರ ಅಭಿಮಾನಿಗಳು: ಐತಿಹಾಸಿಕ ಕ್ಷಣಗಳು ತೆರೆ ಬಿದ್ದ ಸಮಾರಂಭಕ್ಕೆ 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಮೈದಾನದಲ್ಲಿ ಸಾಕ್ಷಿಯಾಗಿದ್ದರು. ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಟಿವಿ ಮೂಲಕ ಸಮಾರೋಪ ಆನಂದಿಸಿದರು ಅಂತಿಮವಾಗಿ ಸ್ಕಾಟ್ಲೆಂಡ್‌ನ ಸಂಸ್ಕೃತಿ ಅನಾವರಣ ಹಾಗೂ ರಾಷ್ಟ್ರಗೀತೆ ಮೂಲಕ ಸಮಾರಂಭಕ್ಕೆ ತೆರೆ ಎಳೆಯಲಾಯಿತು.
ಜೋನ್ಸ್‌ಶ್ರೇಷ್ಠ ಅಥ್ಲೀಟ್: ಕ್ರೀಡಾಕೂಟದಲ್ಲಿ 1 ಚಿನ್ನ ಮತ್ತು ಐದು ಬೆಳ್ಳಿ ಪದಕಗಳನ್ನು ಗೆದ್ದ ವೇಲ್ಸ್‌ನ ರಿಧಮಿಕ್ ಜಿಮ್ನಾಸ್ಟಿಯನ್ ಫ್ರಾನ್ಸಿಸ್ಕಾ ಜೋನ್ಸ್ ಅವರು ಕ್ರೀಡಾಕೂಟದ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೋನ್ಸ್‌ಗೆ ಡೇವಿಡ್ ಡಿಕ್ಸಾನ್ ಪ್ರಶಸ್ತಿ ನೀಡಲಾಯಿತು.
ಗೋಲ್ಡ್‌ಕೋಸ್ಟ್‌ನಲ್ಲಿ ಮುಂದಿನ ಕ್ರೀಡಾಕೂಟ: ಮುಂದಿನ ಕಾಮನ್‌ವೆಲ್ತ್ ಕ್ರೀಡಾಕೂಟ 2018ರಲ್ಲಿ ಏಪ್ರಿಲ್ 4ರಿಂದ 15ರವರೆಗೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿದೆ. ಹೀಗಾಗಿ ಕಾಮನ್ವೆಲ್ತ್ ಕ್ರೀಡಾಕೂಟದ ಕಾಮನ್‌ವೆಲ್ತ್ ಧ್ವಜ ಗೋಲ್ಡ್ ಕೋಸ್ಟ್‌ಗೆ ಹಸ್ತಾಂತರಿಸಲಾಯಿತು.

21ನೇ ಕ್ರೀಡಾಕೂಟ

2018ರಲ್ಲಿನ 21ನೇ ಕಾಮನ್‌ವೆಲ್ತ್ ಕ್ರೀಡಾಕೂಟ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಏಪ್ರಿಲ್ 4ರಿಂದ 15ರವರೆಗೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement