ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತೀಯ ಹಾಕಿ ಪಟುಗಳಿಗೆ ಬಾಂಗ್ಲಾದಲ್ಲಿ ಅಭ್ಯಾಸ ಸಮರ

Srinivasa Murthy VN
Updated On : 4 Aug 2014, 11:35 am

ನವದೆಹಲಿ: ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಸಂಪಾದಿಸಿರುವ ಭಾರತ ಹಾಕಿ ತಂಡದ ಆಟಗಾರರು ಮುಂದಿನ ತಿಂಗಳು ನಡೆಯಲಿರುವ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಾದರೂ ಇದು ಚಿನ್ನದ ಪದಕವಾಗಿ ಮಾರ್ಪಾಡುಗೊಳ್ಳಲಿ ಎಂಬ ದೊಡ್ಡ ಕನಸು ಹೊತ್ತಿದ್ದಾರೆ.   ಈ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್‌ಗೆ ಅತ್ಯುತ್ತಮ ರೀತಿಯಲ್ಲಿ ಅಣಿಯಾಗಲು ನಿರ್ಧರಿಸಿರುವ ಭಾರತದ ಆಟಗಾರರು ಬಾಂಗ್ಲಾದೇಶದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸರಣಿಯನ್ನು ಉತ್ತಮ ಅಭ್ಯಾಸ ವೇದಿಕೆಯನ್ನಾಗಿ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಭಾರತ ತಂಡದ ಯುವ ಆಟಗಾರರಿಗೆ ಇದರಿಂದ ಹೆಚ್ಚು ಉಪಯೋಗವಾಗುವ ವಿಶ್ವಾಸವಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಈ ಸರಣಿ ಆಗಸ್ಟ್ 6ರಿಂದ ಆರಂಭವಾಗಲಿದೆ. ಆಗಸ್ಟ್ 5ರಂದ ಢಾಕಾಗೆ ಪ್ರಯಾಣ ಬೆಳೆಸಲಿರುವ ಆಟಗಾರರು, ಆ. 6, 8 ಮತ್ತು 9ರಂದು ಕ್ರಮವಾಗಿ ನಡೆಯಲಿರುವ ಮೂರು ಪಂದ್ಯಗಳಲ್ಲಿ ಆತಿಥೇಯ ತಂಡವನ್ನು ಎದುರಿಸಲಿದ್ದಾರೆ.  ಏಷ್ಯನ್ ಗೇಮ್ಸ್‌ಗಾಗಿ ಆಯ್ಕೆಯಾಗಿರುವ ಸಂಭಾವ್ಯ ಆಟಗಾರರು ಬಾಂಗ್ಲಾ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದು, ರಕ್ಷಣಾ ಆಟಗಾರ ವಿಕ್ರಂ ಕಾಂತ ತಂಡದ ನಾಯಕರಾಗಿದ್ದರೆ, ಸಂಪರ್ಕ ಆಟಗಾರ ಎಸ್.ಕೆ. ಉತ್ತಪ್ಪ ಉಪನಾಯಕರಾಗಿದ್ದಾರೆ.
ಏಷ್ಯನ್ ಗೇಮ್ಸ್ ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರ ವರೆಗೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement