ವಿಶ್ವ ಚಾಂಪಿಯನ್ಶಿಪ್ ಕೈಬಿಡಲು ಯೋಗೇಶ್ವರ ಯೋಚನೆ
ನವದೆಹಲಿ: ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಭಾರತೀಯ ಕುಸ್ತಿ ಪಟು ಯೋಗೇಶ್ವರ ದತ್, ತಾಷ್ಕೆಂಟ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಿಂದ ಹೊರಗುಳಿಯುವ ಸಾಧ್ಯತೆಯಿದೆ.
ವಿಶ್ವ ಚಾಂಪಿಯನ್ಶಿಪ್ ಸೆಪ್ಟೆಂಬರ್ 8ರಿಂದ 14ರ ವರೆಗೆ ಉಜ್ಬೇಕಿಸ್ತಾನದ ತಾಷ್ಕೆಂಟ್ನಲ್ಲಿ ನಡೆಯಲಿದೆ. ಆದರೆ, ಈ ಕ್ರೀಡಾಕೂಟ ಕಳೆದ ಐದು ದಿನಗಳಾಗುವಷ್ಟರಲ್ಲಿ ದಕ್ಷಿಣ ಕೊರಿಯಾದ ಇಂಚಾನ್ನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್ನತ್ತ ಗಮನ ಹರಿಸಿರುವ ಯೋಗೇಶ್ವರ, ವಿಶ್ವ ಚಾಂಪಿಯನ್ಶಿಪ್ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಗ್ಲಾಸ್ಗೋ ಕಾಮನ್ವೆಲ್ತ್ ಕೂಟದಲ್ಲಿ ಭಾರತೀಯ ಕುಸ್ತಿ ಪಟು ಪುರುಷರ 65 ಕೆ.ಜಿ. ಫ್ರೀಸ್ಟೈಲ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ವಿಶ್ವ ಚಾಂಪಿಯನ್ಶಿಪ್ ಮತ್ತು ಏಷ್ಯನ್ ಗೇಮ್ಸ್ ನಡುವೆ ಕೆಲವೇ ದಿನಗಳ ಅಂತರವಿರುವ ಕಾರಣ ವಿಶ್ವ ಚಾಂಪಿಯನ್ಶಿಪ್ನಿಂದ ಹೊರಗುಳಿಯಬಹುದು. ಒಂದು ವೇಳೆ ಗಾಯಗೊಂಡರೆ, ಕೂಡಲೇ ಚೇತರಿಸಿಕೊಳ್ಳಲು ಕಷ್ಟವಾಗಲಿದ್ದು, ಕಾರಣ ಏಷ್ಯನ್ ಗೇಮ್ಸ್ನಲ್ಲಿ ಮಾತ್ರ ಪಾಲ್ಗೊಳ್ಳುವುದು ಸೂಕ್ತಎಂದಿದ್ದಾರೆ.