ಕೆಎಸ್‌ಸಿಎ ಜಟಾಪಟಿ: ಬ್ರಿಜೇಶ್ ಬಣದ ವಿರುದ್ಧ ಕುಂಬ್ಳೆ ಬಣ ಗರಂ
ಕೆಎಸ್‌ಸಿಎ ಆಂತರೀಕ ಕಚ್ಚಾಟ ಮುಂದುವರೆದಿದ್ದು, ಆಡಳಿತಾತ್ಮಕ..
ಬೆಂಗಳೂರು: ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿನ ಆಂತರೀಕ ಕಚ್ಚಾಟ ಮುಂದುವರೆದಿದ್ದು, ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ನಡೆದ ಸಭೆಯಿಂದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರು ಹೊರನಡೆದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಕೆಎಸ್‌ಸಿಎ ಕಚೇರಿಯಲ್ಲಿ ನಡೆದ ಇಂದಿನ ಸಭೆಯಲ್ಲಿ ಕ್ಲಬ್‌ಹೌಸ್ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬ್ರಿಜೇಶ್ ಬಣದ ವಿರುದ್ಧ ಅನಿಲ್ ಕುಂಬ್ಳೆ ಮತ್ತು ಶ್ರೀನಾಥ್ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಭೆಯಿಂದ ಅರ್ಧದಲ್ಲೇ ಎದ್ದು ಹೊರಬಂದಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀನಾಥ್ ಅವರು, ಕೆಎಸ್‌ಸಿಎಯಲ್ಲಿ ಹಣ ದುರುಪಯೋಗವಾಗುತ್ತಿದೆ. ಕ್ರಿಕೆಟ್ ಅಭಿವೃದ್ಧಿಗಿಂತ ಕ್ಲಬ್‌ಹೌಸ್ ನಿರ್ಮಾಣಕ್ಕೆ ಹೆಚ್ಚು ಆಧ್ಯತೆ ನೀಡಲಾಗುತ್ತಿದೆ ಎಂದು ಖಾರವಾಗಿ ಹೇಳಿದರು. ಇದೇ ರೀತಿಯ ಅಭಿಪ್ರಾಯವನ್ನು ಶ್ರೀನಾಥ್ ಅವರು ಕೂಡ ಹಂಚಿಕೊಂಡರು.
ಕಳೆದ ವರ್ಷ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವದ ಅದ್ಧೂರಿ ಸಮಾರಂಭಕ್ಕಾದ ಖರ್ಚಿನ ವಿಚಾರ ಇದೀಗ ಆಡಳಿತ ಮತ್ತು ವಿರೋಧಿ ಬಣಗಳ ನಡುವೆ ಜಟಾಪಟಿಗೆ ಕಾರಣವಾಗಿದ್ದು, ಇಂದಿನ ಸಭೆಯಲ್ಲಿ ಈ ವಿಚಾರವನ್ನು ಬ್ರಿಜೇಶ್ ಬಣ ಪ್ರಶ್ನಿಸಿದೆ. ಅಲ್ಲದೆ ಕಾರ್ಯಕ್ರಮಕ್ಕಾದ ಸಂಪೂರ್ಣ ಖರ್ಚಿನ ಬಗ್ಗೆ ವಿವರ ನೀಡುವಂತೆ ಬ್ರಿಜೇಶ್ ಬಣ ಸೂಚಿಸಿದೆ. ಹೀಗಾಗಿ ಬ್ರಿಜೇಶ್ ಬಣದ ವಿರುದ್ಧ ಸಿಟ್ಟಿಗೆದ್ದಿರುವ ಕುಂಬ್ಳೆ ಬಣ ಕ್ಲಬ್‌ಹೌಸ್ ವಿಚಾರವನ್ನು ವಿನಾಕಾರಣ ವಿವಾದ ಮಾಡುತ್ತಿದೆ ಎಂದು ಬ್ರಿಜೇಶ್ ಬಣದ ಸದಸ್ಯರು ಆರೋಪಿಸಿದ್ದಾರೆ.
2013ರಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವ ಸಮಾರಂಭ ನಡೆದಿತ್ತು. ಸಮಾರಂಭಕ್ಕಾಗಿ ಸುಮಾರು 4 ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಆಗ ಅನಿಲ್ ಕುಂಬ್ಳೆ ಬಣ ಅಧಿಕಾರದಲ್ಲಿತ್ತು. ಇದೀಗ ಬ್ರಿಜೇಶ್ ಬಣ ಅಧಿಕಾರದಲ್ಲಿದ್ದು, ಸಮಾರಂಭಕ್ಕಾದ ಖರ್ಚು ವೆಚ್ಚದ ಕುರಿತು ಲೆಕ್ಕ ಕೇಳುತ್ತಿದೆ. ಹೀಗಾಗಿ ಉಭಯ ಬಣಗಳ ನಡುವೆ ಇದ್ದ ಮುಸುಕಿನ ಗುದ್ದಾಟ ಇದೀಗ ಕಾದಾಟವಾಗಿ ಮಾರ್ಪಟ್ಟಿದೆ.