ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶೇಮ್...

5ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್ ಮತ್ತು 244ರನ್‌ಗಳ ದಯನೀಯ ಸೋಲು

Srinivasa Murthy VN
Updated On : 18 Aug 2014, 12:18 pm

5ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್ ಮತ್ತು 244ರನ್‌ಗಳ ದಯನೀಯ ಸೋಲು
ಭಾರತೀಯ ಬ್ಯಾಟ್ಸಮನ್‌ಗಳ ವೈಫಲ್ಯ, 3 ದಿನದಲ್ಲೇ ಅಂತ್ಯಕಂಡ ಪಂದ್ಯ
3-1ರಲ್ಲಿ ಸರಣಿ ಇಂಗ್ಲೆಂಡ್ ಪಾಲು
ಓವಲ್:
2ನೇ ಇನ್ನಿಂಗ್ಸ್‌ನಲ್ಲಿಯೂ ಭಾರತ ತಂಡದ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು, ಕೇವಲ 29.2 ಓವರ್‌ಗಳಲ್ಲೇ ಆಲ್ ಔಟ್ ಆಗುವ ಮೂಲಕ ಇಂಗ್ಲೆಂಡ್ ವಿರುದ್ಧ ತೀವ್ರ ಮುಖಭಂಗವನ್ನು ಅನುಭವಿಸಿದೆ.

ವಿಶ್ವದ ಬಲಿಷ್ಟ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ತಂಡ ಎಂಬ ಖ್ಯಾತಿ ಬೆನ್ನಿಗಿದ್ದರೂ ಕೇವಲ 94ರನ್‌ಗಳಿಗೆ ಭಾರತ ತಂಡ ಆಲ್‌ಔಟ್ ಆಗಿದ್ದು, ಇನ್ನಿಂಗ್ಸ್ ಮತ್ತು 244ರನ್‌ಗಳ ಭಾರಿ ಅಂತರದಿಂದ ಸೋಲುಕಂಡಿದೆ. ಆಲ್‌ರೌಂಡ್ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟರ್ ಕುಕ್ ಬಳಗ ನಿರೀಕ್ಷೆಯಂತೆಯೇ ಐದು ಪಂದ್ಯಗಳ ಸರಣಿಯನ್ನು 3-1ರಲ್ಲಿ ತನ್ನದಾಗಿಸಿಕೊಂಡಿತು.

8ನೇ ವಿಕೆಟ್ ಜೊತೆಯಾಟದೊಂದಿಗೆ 385ರನ್‌ಗಳಿಂದ ಭಾನುವಾರ ಮೂರನೇ ದಿನದಾಟ ಪ್ರಾರಂಭಿಸಿದ ಇಂಗ್ಲೆಂಡ್ ತಂಡ ಜೋ ರೂಟ್ ಅವರ ಅಜೇಯ 149ರನ್‌ಗಳ ಸಹಾಯದಿಂದ ಬೃಹತ್ ಮೊತ್ತವನ್ನು ಪೇರಿಸಿತು. 486ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಭಾರತದ ವಿರುದ್ಧ 338ರನ್‌ಗಳ ಬೃಹತ್ ಮುನ್ನಡೆ ಪಡೆಯಿತು. ಇಶಾಂತ್ ಶರ್ಮಾ ಇಂಗ್ಲೆಂಡ್ ತಂಡದ ಪ್ರಮುಖ 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ, ಇಂಗ್ಲೆಂಡ್ ತಂಡ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಉಳಿದಂತೆ ಮೊದಲ ಇನ್ನಿಂಗ್ಸ್ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಕೇವಲ 29.4 ಓವರ್‌ಗಳಲ್ಲಿ 94 ರನ್‌ಗಳಿಗೆ ಆಲ್‌ಔಟ್ ಆಯಿತು.

ಇಂಗ್ಲೆಂಡ್‌ನ ವೇಗ, ಸ್ವಿಂಗ್ ಮತ್ತು ಪುಟಿತದ ಎಸೆತಗಳನ್ನು ಎದುರಿಸುವಲ್ಲಿ ಕಕ್ಕಾಬಿಕ್ಕಿಯಾದ ಟೀಂ ಇಂಡಿಯಾದ ಯಾವುದೇ ಬ್ಯಾಟ್ಸ್‌ಮನ್ ಪ್ರತಿರೋಧ ತೋರದೆ ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕರಾದ ಗೌತಮ್ ಗಂಭೀರ್ (3ರನ್) ಮತ್ತು ಮುರಳಿ ವಿಜಯ್ (2ರನ್) ಅವರು ಎರಡಂಕಿ ಕೂಡ ದಾಟದೇ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ 82 ರನ್‌ಗಳನ್ನು ಗಳಿಸಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಕೇವಲ 5 ಎಸೆತ ಎದುರಿಸಿ ಶೂನ್ಯಕ್ಕೆ ಔಟಾಗಿದ್ದು, ಭಾರತ ತಂಡಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿತ್ತು.

ಸತತ ವಿಕೆಟ್‌ಗಳು ಬೀಳುತ್ತಿದ್ದಂತೆಯೇ ಗಾಬರಿಗೊಳಗಾದಂತೆ ಕಂಡ ಬ್ಯಾಟ್ಸ್‌ಮನ್‌ಗಳು ಒಂದುರೀತಿಯಲ್ಲಿ ಗೊಂದಲಕ್ಕೊಳಗಾದರು. ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಇತ್ತ ವಿಕೆಟ್ ಕೈಚೆಲ್ಲುತ್ತಾ ಬಂದ ದಾರಿಗೆ ಸುಂಕವಿಲ್ಲ ಎಂಬ ರೀತಿಯಲ್ಲಿ ನಿರ್ಗಮಿಸುತ್ತಿದ್ದರೆ, ಅತ್ತ ಇಂಗ್ಲೆಂಡ್ ಆಟಗಾರರು ಮೈದಾನದಲ್ಲಿಯೇ ಮುಸಿ ಮುಸಿ ನಗುತ್ತಿದ್ದ ದೃಶ್ಯ ಕಂಡುಬಂದಿತು. ಭಾರತ ತಂಡದ ಮೊತ್ತ 50ರ ಗಡಿ ತಲುಪುವುದರೊಳಗಾಗಿಯೇ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಭಾರತ ತಂಡದ ದೌರ್ಬಲ್ಯವನ್ನು ಅರಿತಿದ್ದ ಇಂಗ್ಲೆಂಡ್ ಬೌಲರ್‌ಗಳು ಆಕ್ರಮಣಕಾರಿ ದಾಳಿ ಸಂಘಟಿಸುತ್ತ ತಮ್ಮ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಕ್ರಿಸ್ ಜೋರ್ಡಾನ್ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಬೆನ್ನೆಲುಬು ಮುರಿದರು.

ರೂಟ್ ಶತಕ ಇಂಗ್ಲೆಂಡ್ ಬೃಹತ್ ಮುನ್ನಡೆ
ಇದಕ್ಕೂ ಮೊದಲು ಭಾರತದ ಮೊದಲ ಇನ್ನಿಂಗ್ಸ್‌ನ 148 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ 486ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಎರಡನೇ ದಿನದ ಮೊತ್ತ 7 ವಿಕೆಟ್‌ಗೆ 385 ರನ್‌ಗಳೊಂದಿಗೆ ಮೂರನೇ ದಿನದಾಟ ಮುಂದುವರೆಸಿದ ಅತಿಥೇಯ ತಂಡದ ಪರ ಜೋ ರೂಟ್ ಅವರು ಆಕರ್ಷಕ ಶತಕ ಬಾರಿಸಿದರು. ರೂಟ್ 165 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 149ರನ್‌ಗಳಿಸಿದರು. ಅವರ ಸಾಹಸಮಯ ಶತಕದ ನೆರವಿನಿಂದ ಇಂಗ್ಲೆಂಡ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ದೊರೆಯಿತು.

ಸಂಕ್ಷಿಪ್ತ ಸ್ಕೋರ್ ವಿವರ
ಭಾರತ:
ಮೊದಲ ಇನಿಂಗ್ಸ್ 61.1 ಓವರ್‌ಗಳಲ್ಲಿ 148
ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 116.3 ಓವರ್‌ಗಳಲ್ಲಿ 486
(ಶನಿವಾರ 105 ಓವರ್‌ಗಳಲ್ಲಿ 7 ವಿಕೆಟ್‌ಗೆ 385)
ಜೋ ರೂಟ್‌ ಔಟಾಗದೆ  149
ಕ್ರಿಸ್‌ ಜೋರ್ಡಾನ್‌ ಸಿ ಮಹೇಂದ್ರ ಸಿಂಗ್‌ ದೋನಿ ಬಿ ಇಶಾಂತ್ ಶರ್ಮ  20
ಸ್ಟುವರ್ಟ್‌ ಬ್ರಾಡ್‌ ಸಿ ವಿರಾಟ್‌ ಕೊಹ್ಲಿ ಬಿ ಇಶಾಂತ್ ಶರ್ಮ  37
ಜೇಮ್ಸ್‌ ಆ್ಯಂಡರ್‌ಸನ್‌ ಎಲ್‌ಬಿಡಬ್ಲ್ಯು ಬಿ ರವಿಚಂದ್ರನ್‌ ಅಶ್ವಿನ್‌  01
ಇತರೆ: (ಬೈ–18, ಲೆಗ್‌ ಬೈ–3, ವೈಡ್‌–1, ನೋಬಾಲ್‌ 11) 33

ವಿಕೆಟ್‌ ಪತನ:  1–66 (ರಾಬ್ಸನ್‌; 20.5), 2–191 (ಕುಕ್‌; 57.4), 3–201 (ಬಲಾನ್ಸ್‌; 62.5), 4–204 (ಬೆಲ್‌; 63.1), 5–229 (ಅಲಿ; 68.6), 6–309 (ಬಟ್ಲರ್; 93.4), 7–318 (ವೋಕ್ಸ್‌; 94.5), 8–400 (ಜೋರ್ಡಾನ್‌; 107.2), 9–463 (ಬ್ರಾಡ್‌; 113.6), 10–486 (ಆ್ಯಂಡರ್‌ಸನ್‌; 116.3)

ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 24–3–86–1 (ವೈಡ್‌–1), ಇಶಾಂತ್‌ ಶರ್ಮ 30–8–96–4 (ನೋಬಾಲ್‌–5), ವರುಣ್‌ ಆ್ಯರನ್‌ 29–1–153–2 (ನೋಬಾಲ್‌–4), ಸ್ಟುವರ್ಟ್‌ ಬಿನ್ನಿ 12–0–58–0 (ನೋಬಾಲ್‌–2), ರವಿಚಂದ್ರನ್‌ ಅಶ್ವಿನ್‌ 21.3–2–72–3

ಭಾರತ: ಎರಡನೇ ಇನಿಂಗ್ಸ್‌ 29.2 ಓವರ್‌ಗಳಲ್ಲಿ  94
ಮುರಳಿ ವಿಜಯ್‌ ಎಲ್‌ಬಿಡಬ್ಲ್ಯು ಬಿ ಜೇಮ್ಸ್‌ ಆ್ಯಂಡರ್‌ಸನ್‌  02
ಗೌತಮ್‌ ಗಂಭೀರ್ ರನೌಟ್‌ (ಕ್ರಿಸ್‌ ವೋಕ್ಸ್‌)  03
ಚೇತೇಶ್ವರ ಪೂಜಾರ ಸಿ ಜಾಸ್‌ ಬಟ್ಲರ್‌ ಬಿ ಜೇಮ್ಸ್‌ ಆ್ಯಂಡರ್‌ಸನ್‌  11
ವಿರಾಟ್‌ ಕೊಹ್ಲಿ ಸಿ ಅಲಸ್ಟೇರ್‌ ಕುಕ್‌ ಬಿ ಕ್ರಿಸ್‌ ಜೋರ್ಡಾನ್‌  20
ಅಜಿಂಕ್ಯ ರಹಾನೆ ಸಿ ಗ್ಯಾರಿ ಬಲಾನ್ಸ್‌ ಬಿ ಸ್ಟುವರ್ಟ್‌ ಬ್ರಾಡ್‌  04
ಮಹೇಂದ್ರ ಸಿಂಗ್‌ ದೋನಿ ಸಿ ಸ್ಯಾಮ್‌ ರಾಬ್ಸನ್‌ ಬಿ ಕ್ರಿಸ್‌ ವೋಕ್ಸ್‌  00
ಸ್ಟುವರ್ಟ್‌ ಬಿನ್ನಿ ಔಟಾಗದೆ  25
ರವಿಚಂದ್ರನ್‌ ಅಶ್ವಿನ್‌ ಸಿ ಇಯಾನ್‌ ಬೆಲ್‌ ಬಿ ಕ್ರಿಸ್‌ ಜೋರ್ಡಾನ್‌  07
ಭುವನೇಶ್ವರ್‌ ಕುಮಾರ್‌ ಸಿ ಇಯಾನ್‌ ಬೆಲ್‌ ಬಿ  ಕ್ರಿಸ್‌ ಜೋರ್ಡಾನ್‌  04
ವರುಣ್‌ ಆ್ಯರನ್‌ ರನೌಟ್‌ (ಅಲಿ/ಬಟ್ಲರ್‌)  01
ಇಶಾಂತ್‌ ಶರ್ಮ ಸಿ ಮೊಯೀನ್‌ ಅಲಿ ಬಿ ಕ್ರಿಸ್‌ ಜೋರ್ಡಾನ್‌  02
ಇತರೆ: (ಬೈ–8, ಲೆಗ್‌ ಬೈ–6, ವೈಡ್‌–1) 15

ವಿಕೆಟ್‌ ಪತನ: 1–6 (ವಿಜಯ್‌; 4.5), 2–9 (ಗಂಭೀರ್; 6.1), 3–30 (ಪೂಜಾರ; 12.5), 4–45 (ರಹಾನೆ; 17.5), 5–46 (ದೋನಿ; 18.4), 6–62 (ಕೊಹ್ಲಿ; 23.2), 7–70 (ಅಶ್ವಿನ್‌; 25.2), 8–74 (ಭುವನೇಶ್ವರ್‌ ; 25.6), 9–84 (ಆ್ಯರನ್‌; 26.6), 10–94 (ಶರ್ಮ; 29.2)

ಬೌಲಿಂಗ್‌:  ಜೇಮ್ಸ್‌ ಆ್ಯಂಡರ್‌ಸನ್‌ 8–3–16–2, ಸ್ಟುವರ್ಟ್‌ ಬ್ರಾಡ್‌ 10–2–22–1, ಕ್ರಿಸ್‌ ವೋಕ್ಸ್‌ 7–0–24–1, ಕ್ರಿಸ್‌ ಜೋರ್ಡಾನ್‌ 4.2–0–18–4.

ಫಲಿತಾಂಶ: ಇಂಗ್ಲೆಂಡ್‌ಗೆ ಇನಿಂಗ್ಸ್‌ ಮತ್ತು 244ರನ್‌ ಗೆಲುವು ಹಾಗೂ 3–1ರಲ್ಲಿ ಸರಣಿ
ಪಂದ್ಯ ಶ್ರೇಷ್ಠ: ಜೋ ರೂಟ್‌ , ಸರಣಿ ಶ್ರೇಷ್ಠ: ಭುವನೇಶ್ವರ್‌ ಕುಮಾರ್‌ ಮತ್ತು ಜೇಮ್ಸ್‌ ಆ್ಯಂಡರ್‌ಸನ್‌.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement