ಟೀ ಇಂಡಿಯಾ ಸಿಬ್ಬಂದಿಯಲ್ಲಿ ಮೇಜರ್ ಸರ್ಜರಿ: ಕೋಚ್ಗೆ ಕತ್ತರಿ
ಏಕದಿನ ಸರಣಿಗೆ ರವಿಶಾಸ್ತ್ರಿ ನಿರ್ದೇಶಕ; ಬಂಗಾರ-ಭರತ್ ಸಹಾಯಕ ಕೋಚ್, ಶ್ರೀಧರ್ ಫೀಲ್ಡಿಂಗ್ ಕೋಚ್
ನವದೆಹಲಿ: ಇಂಗ್ಲೆಂಡ್ ನೆಲದಲ್ಲಿ ಟೀ ಇಂಡಿಯಾ ಅನುಭವಿಸಿದ ದಯನೀಯ ವೈಫಲ್ಯದ ಹಿನ್ನಲೆಯಲ್ಲಿ ದಿಟ್ ಹೆಜ್ಜೆಯನ್ನಿಟ್ಟಿರುವ ಭಾರಕ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೊದಲಿಗೆ ತಂಡದ ಸಿಬ್ಬಂದಿ ವರ್ಗದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ.
ಟೆಸ್ಟ್ ಸರಣಿಯಲ್ಲಿನ ವೈಫಲ್ಯ ಏಕದಿನ ಸರಣಿಯಲ್ಲೂ ಮುಂದುವರೆಯಬಾರದೆಂದು ಎಚ್ಚೆತ್ತುಕೊಂಡಿರುವ ಬಿಸಿಸಿಐ, ಮಾಜಿ ನಾಯಕ ರವಿಶಾಸ್ತ್ರಿ ಅವರನ್ನು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರುಗಳ ಸರಣಿಗಾಗಿ ನಿರ್ದೇಶಕರನ್ನಾಗಿ ನೇಮಿಸಿದೆ. ಇದರೊಂದಿಗೆ ಕೋಚ್ ಡಂಕನ್ ಫ್ಲೆಚರ್ ಜವಾಬ್ದಾರಿಯನ್ನು ಕೊಂಚ ಕುಗ್ಗಿಸಿದಂತೆಯೂ ಆಗಿದೆ. ಅಂದರೆ ಪರೋಕ್ಷವಾಗಿ ಅವರ ಹೊಣೆಯನ್ನು ಕಸಿದುಕೊಂಡಾತಾಗಿದೆ. ಇನ್ನು ಭಾರತ ತಂಡದ ನಾಯಕತ್ವ ಸ್ಥಾನದಿಂದ ಧೋನಿ ಅವರನ್ನು ಕೆಳಗಿಳಿಸುವ ಅವಶ್ಯಕತೆ ಇಲ್ಲ ಎಂದು ಬಿಸಿಸಿಐ ತಿಳಿಸಿದೆ. ಟೀ ಇಂಡಿಯಾ ವೈಫಲ್ಯ ಅನುಭವಿಸಿರುವ ಹಿನ್ನಲೆಯಲ್ಲಿ ಸರಿಯಾದ ಮಾರ್ಗದರ್ಶನ ನೀಡಲು ರವಿಶಾಸ್ತ್ರಿಗೆ ಜವಾಬ್ದಾರಿ ವಹಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ವೆಸ್ಟ್ ಇಂಡೀಸ್ನಲ್ಲಿ ನಡೆದ 2007ರ ವಿಶ್ವಕಪ್ನಲ್ಲಿ ಕೂಡ ಭಾರತ ಅವಮಾನಕಾರಿಯಾಗಿ ಸೋತು ಸ್ಪರ್ಧಾಕಣದಿಂದ ಬೇಗನೆ ಹೊರಬಿದ್ದ ಸಂದರ್ಭದಲ್ಲಿ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ರನ್ನು ಅಮಾನತುಗೊಳಿಸಿ ಈ ಮಾಜಿ ಆಲ್ರೌಂಡರ್ನನ್ನು ಬಾಂಗ್ಲಾದೇಶ ಪ್ರವಾಸಕ್ಕಾಗಿ ಭಾರತ ತಂಡದೊಂದಿಗೆ ಕ್ರಿಕೆಟ್ ಮ್ಯಾನೇಜರ್ ಆಗಿ ಕಳುಹಿಸಿಕೊಡಲಾಗಿತ್ತು.
ಇನ್ನು ಬೌಲಿಂಗ್ ಕೋಚ್ ಆಗಿದ್ದ ಜೋ ಡಾಸ್ ಮತ್ತು ಫೀಲ್ಡಿಂಗ್ ಕೋಚ್ ಟ್ರೆವರ್ ಪೆನ್ನಿ ಅವರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಮಾಜಿ ಆಟಗಾರರಾದ ಸಂಜಯ್ ಬಂಗಾರ ಮತ್ತು ಭರತ್ ಅರುಣ್ರನ್ನು ಸಹಾಯಕ ಕೋಚ್ ಹುದ್ದೆಗೆ ನೇಮಿಸಲಾಗಿದೆ. ಅಲ್ಲದೆ ಆರ್.ಶ್ರೀಧರ್ ಅವರನ್ನು ಕ್ಷೇತ್ರರಕ್ಷಣೆಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಆಗಸ್ಟ್ 25ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಫ್ಲೆಚರ್ ಅವರು ಭಾರತ ತಂಡದ ಮುಖ್ಯ ಕೋಚ್ ಆಗಿಯೇ ಮುಂದುವರಿಯಲಿದ್ದಾರೆ. ಆದರೆ ನಿರ್ದೇಶಕರಾಗಿ ನೇಮಕಗೊಂಡಿರುವ ರವಿಶಾಸ್ತ್ರಿ ಹಾಗೂ ಬಂಗಾರ, ಭರತ್ ಮತ್ತು ಶ್ರೀಧರ್ ಅವರು ಫ್ಲೆಚರ್ಗೆ ನೆರವಾಗಲಿದ್ದಾರೆ.
ವಿದೇಶಿ ನೆಲದಲ್ಲಿ ಭಾರತ ತಂಡದ ವೈಫಲ್ಯ ಮತ್ತೊಮ್ಮೆ ಮುಂದುವರಿಯುತ್ತಿದ್ದಂತೆಯೇ ಟೀಕೆಗಳ ಸುರಿಮಳೆಯೇ ವ್ಯಕ್ತವಾಗಿತ್ತು. ಪ್ರಮುಖವಾಗಿ ಮುಖ್ಯ ಕೋಚ್ ಫ್ಲೆಚರ್ ಕೊಡುಗೆಯನ್ನು ಪ್ರಶ್ನಿಸಿದ್ದ ಅನೇಕ ಮಾಜಿ ಆಟಗಾರರು, ವಿದೇಶಿ ತರಬೇತುದಾರರನ್ನು ಕೈಬಿಡುವ ಒಗ್ಗೆಯೂ ಒತ್ತಿ ಹೇಳಿದ್ದರು. ಜೊತೆಗೆ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದ ಬಗ್ಗೆಯೂ ಚಕಾರವೆತ್ತಿದ್ದರು. ಈ ಹಿನ್ನಲೆಯಲ್ಲಿ ಬಿಸಿಸಿಐನ ಎಲ್ಲ ಪದಾಧಿಕಾರಿಗಳು ಪರಸ್ಪರ ಚರ್ಚಿಸಿ ಸಿಬ್ಬಂಧಿ ವಿಭಾಗದಲ್ಲಿ ಅನೇಕ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿತು. ಸಧ್ಯಕ್ಕೆ ಧೋನಿಯನ್ನು ನಾಯಕನಾಗಿ ಮುಂದುವರೆಯಲು ಒಪ್ಪಲಾಗಿದೆ.
ಫ್ಲೆಚರ್ ಕೋಚ್ ಆದ ನಂತರ ಭಾರತ ತಂಡ ಉಪಖಂಡದ ಹೊರಗೆ 13 ಟೆಸ್ಟ್ಗಳನ್ನು ಸೋತಿದೆ. ಇಂಗ್ಲೆಂಡ್ನಲ್ಲಿ 7, ಆಸ್ಟ್ರೇಲಿಯಾದಲ್ಲಿ 4 ಹಾಗೂ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ತಲಾ ಒಂದರಲ್ಲಿ ಸೋಲುಕಂಡಿದೆ. 52ರ ವಯ್ಯಸಿನ ರವಿಶಾಸ್ತ್ರಿ ಸಾಕಷ್ಟು ಅನುಭವವುಳ್ಳ ಆಟಗಾರರಾಗಿದ್ದು, ಭಾರತ ತಂಡದ ಪರ 80 ಟೆಸ್ಟ್ಗಳನ್ನಾಡಿ 3830 ರನ್ಗಳಿಗೆ ಮತ್ತು 151 ವಿಕೆಟ್ಗಳನ್ನು ಉರುಳಿಸಿದ್ದಾರೆ. ಅಲ್ಲದೆ 150 ಏಕದಿನ ಪಂದ್ಯಗಳಿಂದ 3108ರನ್ ಗಳಿಸಿದ್ದು, 129 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಟೆಸ್ಟ್ನಲ್ಲಿ 11 ಶತಕ ಮತ್ತು 50 ಅರ್ಧಶತಕ ಹಾಗೂ ಏಕದಿನ ಪಂದ್ಯಗಳಲ್ಲಿ 4 ಶತಕ, 18 ಅರ್ಧಶತಕ ಗಳಿಸಿದ್ದಾರೆ.
ಬಂಗಾರ, ಭರತ್, ಶ್ರೀಧರ್ಗೆ ಜವಾಬ್ದಾರಿ ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಯಶಸ್ಸು ಕಂಡಿದ್ದ ಸಂಜಯ್ ಬಂಗಾರ ಮತ್ತು 19 ವರ್ಷದೊಳಗಿನ ಭಾರತ ತಂಡದ ತರಬೇತುದಾರರಾಗಿರುವ ಭರತ್ ಅರುಣ್ ಹಾಗೂ ಪ್ರತಿಭಾನ್ವಿತ ಫೀಲ್ಡಿಂಗ್ ಕೋಚ್ ಎನಿಸಿರುವ ಆರ್.ಶ್ರೀಧರ್ ಅವರುಗಳನ್ನು ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಟೀ ಇಂಡಿಯಾ ಹುಡುಗರ ಜವಾಬ್ದಾರಿ ವಹಿಸಲಾಗಿದೆ.
ಮಾಜಿ ಆಲ್ರೌಂಡರ್ 41ರ ಸಂಜಯ್ ಬಂಗಾರ ಭಾರತದ ಪರ 12 ಟೆಸ್ಟ್ಗಳನ್ನಾಡಿದ್ದು, 470ರನ್ಗಳಿಸಿದ್ದು, ಅಜೇಯ 100 ರನ್ಗಳಿಗೆ ವೈಯುಕ್ತಿಕ ಗರಿಷ್ಠ ಮೊತ್ತವಾಗಿದೆ. ಅಲ್ಲದೆ 7 ವಿಕೆಟ್ ಪಡೆದಿದ್ದಾರೆ. ಹಾಗೂ 15 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 180 ರನ್ಗಳಿಸಿದ್ದು, 7 ವಿಕೆಟ್ ಕಬಳಿಸಿದ್ದಾರೆ. ಪ್ರತಿಭಾನ್ವಿತ ಯುವ ಕೋಚ್ ಎನಿಸಿರುವ ಮಹಾರಾಷ್ಟ್ರದ ಬಂಗಾರ ಗರಡಿಯಲ್ಲೇ ಪಳಗದಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಪ್ರಸ್ತುತ ಭಾರತ ತಂಡದಲ್ಲಿರುವ ಕರಣ್ ಶರ್ಮಾ ಬಂಗಾರ ನಾಯಕತ್ವದಲ್ಲಿಯೇ ಪಾದಾರ್ಪಣೆ ಮಾಡಿದ್ದರು.
ಇನ್ನು ತಮಿಳುನಾಡಿನ ಮಾಜಿ ವೇಗದ ಬೌಲರ್ ಭರತ್ ಅರುಣ್, 1980ರ ಮಧ್ಯಭಾಗದಲ್ಲಿ 2 ಟೆಸ್ಟ್ ಮತ್ತು 4 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದು, ಅಷ್ಟಾಗಿ ಯಶಸ್ಸು ಕಾಣಲಿಲ್ಲ. ದಂತಕತೆ ಕಪಿಲ್ದೇವ್ ಅವರೊಂದಿಗೆ ಹೊಸ ಚೆಂಡು ಹಂಚಿಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರು ಬೌಲಿಂಗ್ ವಿಭಾಗದ ಮುಖ್ಯಸ್ಥರಾಗಿ ಸುಮಾರು ಏಳು ವರ್ಷ ಸೇವೆಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ 2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದುಕೊಂಡ ಉನ್ಮುಕ್ತ್ ಚಾಂದ್ ನೇತೃತ್ವದ ಕಿರಿಯರ ತಂಡಕ್ಕೂ ಮಾರ್ಗದರ್ಶನ ಮಾಡಿದ್ದರು.
19 ವರ್ಷದೊಳಗಿನವರ ಫೀಲ್ಡಿಂಗ್ ಕೋಚ್, ಹೈದರಾಬಾದ್ನ ಮಾಜಿ ರಣಜಿ ಆಟಗಾರ ಶ್ರೀಧರ್, ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ನ ಕ್ಷೇತ್ರರಕ್ಷಣೆಯ ತರಬೇತುದಾರರೂ ಆಗಿದ್ದಾರೆ. ಅವರ ಉತ್ತಮ ಸೇವೆ ಪರಿಗಣಿಸಿ ಬಿಸಿಸಿಐ, ಈ ಹೊಸ ಜವಾಬ್ದಾರಿ ನೀಡಿದೆ. 35 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಶ್ರೀಧರ್, 574ರನ್ಗಳಿಸಿದ್ದು, 91 ವಿಕೆಟ್ ಪಡೆದಿದ್ದಾರೆ. ಇನ್ನು ಧೋನಿ ನಾಯಕತ್ವವನ್ನು ಸಮರ್ಥಿಸಿಕೊಂಡಿರುವ ಭಾರತ ಮಾಜಿ ನಾಯಕ ಸುನಿಲ್ ಗಾವಸ್ಕರ್, ರವಿಶಾಸ್ತ್ರಿ ಅವರನ್ನು ತಂಡದ ನಿರ್ದೇಶಕರನ್ನಾಗಿ ಆಯ್ಕೆ ಮಾಡಿರುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಧೋನಿ ಓಲ್ಡ್ ಟ್ರಾಫರ್ಡ್ ಹಾಗೂ ಓವಲ್ನಲ್ಲಿ ಹೋರಾಟಕಾರಿ ಪ್ರದರ್ಶನ ನೀಡಿದ್ದಾರೆ. ಇಲ್ಲದಿದ್ದರೆ, ಭಾರತ 100ರ ಒಳಗೆ ಆಲೌಟ್ ಆಗುತ್ತಿತ್ತು ಎಂದು ತಿಳಿಸಿದ್ದಾರೆ.