ಐಪಿಎಲ್ಗೇ ಅಂಟಿಕೊಂಡ ವಿದೇಶಿ ಬ್ಯಾಟಿಂಗ್ ವೀರರು
ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಲೀಗ್ ಟಿ-20 ಪಂದ್ಯಾವಳಿಗೆ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್..
ನವದೆಹಲಿ: ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಲೀಗ್ ಟಿ-20 ಪಂದ್ಯಾವಳಿಗೆ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಹಾಗೂ ಶ್ರೀಲಂಕಾದ ಲಸಿತ್ ಮಾಲಿಂಗ ಸೇರಿದಂತೆ ಇತರ ಅಂತಾರಾಷ್ಟ್ರೀಯ ಪ್ರಮುಖ ಆಟಗಾರರು ತಮ್ಮ ದೇಶಗಳ ಟಿ-20 ತಂಡಗಳ ಬದಲಿಗೆ ಐಪಿಎಲ್ ತಂಡಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಬಾರಿ ಎಂಟು ಪ್ರಮುಖ ಆಟಗಾರರು ಒಂದು ತಂಡಕ್ಕಿಂತ ಹೆಚ್ಚಿನ ತಂಡಗಳಲ್ಲಿ ಭಾಗವಹಿಸುವ ಅವಕಾಶವನ್ನು ಹೊಂದಿದ್ದಾರೆ. ಈ ಆಟಗಾರರು ಐಪಿಎಲ್ ತಂಡಗಳ ಪರ ಆಡಲು ಮನಸ್ಸು ಮಾಡಿರುವುದಾಗಿ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯ ಆಯೋಜಕರು ತಿಳಿಸಿದ್ದಾರೆ. ಸೆಪ್ಟೆಂಬರ್ 13ರಿಂದ ಅಕ್ಟೋಬರ್ 4 ರವರೆಗೂ ಭಾರತದಲ್ಲಿ ಚಾಂಪಿಯನ್ಸ್ ಲೀಗ್ ಟಿ-20 ಟೂರ್ನಿ ನಡೆಯಲಿದೆ. ಅಲ್ಲದೆ ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.
ಚಾಂಪಿಯನ್ಸ್ ಲೀಗ್ ತಂಡಗಳ ಒಪ್ಪಂದದ ಪ್ರಕಾರ ಒಂದಕ್ಕಿಂತ ಹೆಚ್ಚು ತಂಡದಲ್ಲಿ ಆಡುವ ಅವಕಾಶ ಹೊಂದಿರುವ ಆಟಗಾರರು, ತಮಗೆ ಇಷ್ಟವಾದ ತಂಡದ ಪರ ಆಡಲು ಸ್ವಾತಂತ್ರ ಹೊಂದಿದ್ದಾರೆ. ಈ ವಿಷಯದಲ್ಲಿ ಆಟಗಾರರ ನಿರ್ಧಾರವೇ ಅಂತಿಮ. ಆಟಗಾರ ಒಂದು ತಂಡವನ್ನು ಆಯ್ಕೆ ಮಾಡಿಕೊಂಡ ನಂತರ, ಉಳಿದ ತಂಡಕ್ಕೆ ಆ ಆಟಗಾರನ ಬದಲಿಗೆ ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ನೀಡಲಾಗುವುದು. ಅಲ್ಲದೆ ಈ ಬಾರಿಯೂ ಐಪಿಎಲ್ ತಂಡಗಳು ವಿದೇಶಿ ತಂಡಗಳ ಆಟಗಾರರನ್ನು ತಮ್ಮ ತಂಡದಲ್ಲಿ ಆಡಿಸಿದರೆ, ಅವರಿಗೆ ಪರಿಹಾರ ಮೊತ್ತವನ್ನು ನೀಡಲಿವೆ ಎಂದು ಚಾಂಪಿಯನ್ಸ್ ಲೀಗ್ ಆಡಳಿತ ಮಂಡಳಿ ಸದಸ್ಯ ಡೀನ್ ಕಿನೊ ತಿಳಿಸಿದ್ದಾರೆ.
ಚಾಂಪಿಯನ್ಸ್ ಲೀಗ್ ಆಟಗಾರರ ನಿಯಮದ ಪ್ರಕಾರ ಯಾವುದೇ ವಿದೇಶಿ ಆಟಗಾರ ತಮ್ಮ ರಾಷ್ಟ್ರೀಯ ತಂಡದ ಹೊರತಾಗಿ ಇನ್ನೊಂದು ತಂಡವನ್ನು ಆಯ್ಕೆ ಮಾಡಿಕೊಂಡರೆ, ತನ್ನ ತವರಿನ ತಂಡಕ್ಕೆ 1.50 ಲಕ್ಷ ಪರಿಹಾರ ಮೊತ್ತ ನೀಡಬೇಕಾಗುತ್ತದೆ. ಈ ಮಾದರಿಯಲ್ಲಿ ನ್ಯೂಜಿಲೆಂಡ್ನ ಕೋರೆ ಆ್ಯಂಡರ್ಸನ್ ಮುಂಬೈ ಇಂಡಿಯನ್ಸ್ ಪರ ಹಾಗೂ ಆಸ್ಚ್ರೇಲಿಯಾದ ಜಾರ್ಜ್ ಬೇಯ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಲಿದ್ದಾರೆ. ಕಾಲಿಸ್ ಕೆಕೆಆರ್ ಪರ ಹಾಗೂ ಪೊಲಾರ್ಡ್ ಹಾಗೂ ಮಾಲಿಂಗ ಸಹ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಪಂದ್ಯವಳಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, 29ಪಂದ್ಯಗಳು ನಡೆಯಲಿವೆ. ತಂಡಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ, ಪ್ರತಿ ಗುಂಪಿನಲ್ಲಿ 5 ತಂಡಗಳಿವೆ. ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಂಡಗಳು ಪ್ರತಿ ಗುಂಪಿಗೆ ಸೇರಿಕೊಳ್ಳಲಿವೆ.
ಎ ಗುಂಪು: ಕೋಲ್ಕತಾ ನೈಟ್ ರೈಡರ್ಸ್, ಡಾಲ್ಫಿನ್ಸ್, ಪರ್ಥ್ ಸ್ಕಾರ್ಚರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮೊದಲ ಕ್ವಾನಿಫೈಯರ್.
ಬಿ ಗುಂಪು: ಕಿಂಗ್ಸ್ ಇಲೆವೆನ್ ಪಂಜಾಬ್, ಕೇಪ್ ಕೊಬ್ರಾಸ್, ಹೊಬಾರ್ಟ್ ಹುರಿಕೇನ್ಸ್, ಬಾರ್ಬಡೋಸ್ ಟ್ರಿಡೆಂಟ್ಸ್, ಎರಡನೇ ಕ್ವಾಲಿಫೈಯರ್ ತಂಡ.
ಕ್ವಾಲಿಫೈಯರ್: ಲಾಹೋರ್ ಲಯನ್ಸ್, ಮುಂಬೈ ಇಂಡಿಯನ್ಸ್, ನಾರ್ಥರನ್ ನೈಟ್ಸ್, ಸೌಥರನ್ ಎಕ್ಸ್ಪ್ರೆಸ್.
ಚಾಂಪಿಯನ್ಸ್ ಲೀಗ್ಗೆ ಜಹೀರ್ ಅಲಭ್ಯ
ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವತ್ತ ಗಮನ ಹರಿಸಿರುವ, ಭಾರತದ ಹಿರಿಯ ವೇಗದ ಬೌಲರ್ ಜಹೀರ್ ಖಾನ್ ಮುಂಬರುವ ಚಾಂಪಿಯನ್ಸ್ ಲೀಗ್ ಟಿ-20 ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ನನ್ನ ದೈಹಿಕ ಕ್ಷಮತೆಗೆ ತಕ್ಕ ರೀತಿಯಲ್ಲಿ ನಿರ್ಧಾರ ತೆಗೆದುಕೊಂಡು ಸಾಗಲು ಇಚ್ಛಿಸುತ್ತೇನೆ. ಮತ್ತೆ ಕ್ರಿಕೆಟ್ ಆಡಲು ಉತ್ಸುಕನಾಗಿದ್ದು, ಸಾಧ್ಯಾವಾದಷ್ಟು ಉತ್ತಮ ರೀತಿಯಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸಬೇಕಿದೆ. ನನ್ನ ಪ್ರದರ್ಶನ ಹಾಗೂ ಸಾಮರ್ಥ್ಯದ ಬಗ್ಗೆ ಮೊದಲು ನಾನು ತೃಪ್ತಿ ಹೊಂದಬೇಕು. ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಹಾಗೂ ಸವಾಲನ್ನು ಎದುರಿಸಲು ಸಿದ್ಧನಾದ ನಂತರ ನಿರ್ಧಾರ ಕೈಗೊಳ್ಳುವುದಾಗಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಜಹೀರ್ ಹೇಳಿದ್ದಾರೆ.