ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಾರ್ಡಿಫ್ ಪಂದ್ಯ ಫಿಕ್ಸ್ ಆಗಿತ್ತಾ?

ಶಂಕಿತ ಬುಕ್ಕಿಯಿಂದ ಮೈದಾನದಲ್ಲೇ ಲ್ಯಾಪ್‌ಟಾಪ್, ಮೊಬೈಲ್ ಬಳಕೆ

Srinivasa Murthy VN
Updated On : 30 Aug 2014, 10:40 am

ಭಾರತ-ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದ ಮೇಲೆ ಫಿಕ್ಸಿಂಗ್ ಕರಿನೆರಳು
ಶಂಕಿತ ಬುಕ್ಕಿಯಿಂದ ಮೈದಾನದಲ್ಲೇ ಲ್ಯಾಪ್‌ಟಾಪ್, ಮೊಬೈಲ್ ಬಳಕೆ
ಲಂಡನ್:
ಕಾರ್ಡಿಫ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯ ಫಿಕ್ಸ್ ಆಗಿರಬಹುದು ಎಂಬ ಅನುಮಾನಗಳು ಮೂಡುತ್ತಿವೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಮೇಲೆ ಫಿಕ್ಸಿಂಗ್ ಕರಿನೆರಳು ಬಿದಿದ್ದು, ಕಾರ್ಡಿಫ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿರಬಹುದು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಶಂಕೆ ವ್ಯಕ್ತಪಡಿಸಿದೆ.

ಕಾರ್ಡಿಫ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ವೇಳೆ ಶಂಕಿತ ವ್ಯಕ್ತಿಯೋರ್ವ ಸ್ಟೇಡಿಯಂನ ನಿಯಮಾವಳಿಗಳನ್ನು ಮೀರಿ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳೊಂದಿಗೆ ಸ್ಟೇಡಿಯಂ ಪ್ರವೇಶಿಸಿದ್ದ. ಅಲ್ಲದೆ ಭಾರತ ತಂಡದ ಬ್ಯಾಟಿಂಗ್ ವೇಳೆ ಆತ ತನ್ನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನಿನಲ್ಲಿ ಕಾರ್ಯ ನಿರತನಾಗಿದ್ದ. ಸ್ಟೇಡಿಂಯನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬಳಿಕ ಇದನ್ನು ಗಮನಿಸಿದ ಮೈದಾನದ ಸಿಬ್ಬಂದಿ ಆತನನ್ನು ಕ್ರೀಡಾಂಗಣದಿಂದ ಹೊರಗಟ್ಟಿದ್ದರು.

ಬಳಿಕ ಘಟನೆ ಕುರಿತಂತೆ ಅನುಮಾನ ವ್ಯಕ್ತವಾದಾಗ ಆತ ಅಲ್ಲಿಂದ ಅದಾಗಲೇ ಕಾಲ್ಕಿತ್ತಿದ್ದ. ಘಟನೆ ಕುರಿತಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕಾರ್ಡಿಫ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ. ಅಲ್ಲದೆ ಐಸಿಸಿ ಭ್ರಷ್ಟಾಚಾರ ನಿಯಂತ್ರಣ ಸಮಿತಿಗೆ ದೂರು ಕೂಡ ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಐಸಿಸಿಯ ಭ್ರಷ್ಟಾಚಾರ ನಿಯಂತ್ರಣ ಸಮಿತಿ ಮುಂದಿನ ಮೂರು ಪಂದ್ಯಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಅಲ್ಲದೆ ಕ್ರೀಡಾಂಗಣದಿಂದ ನಾಪತ್ತೆಯಾದ ವ್ಯಕ್ತಿಯ ಶೋಧಕ್ಕಾಗಿ ಸ್ಥಳೀಯ ಪೊಲೀಸರ ನೆರವು ಪಡೆದುಕೊಂಡಿದೆ.

ಇಂಗ್ಲೆಂಡ್ ಮಾಜಿ ಆಟಗಾರರ ಮೇಲೆ ಕ್ರಿಕೆಟ್ ಮಂಡಳಿ ಶಂಕೆ
ಇದೇ ವೇಳೆ 2 ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಹೀನಾಯ ಸೋಲಿನ ಕುರಿತಂತೆ ಅನುಮಾನ ವ್ಯಕ್ತಪಡಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ಇಂಗ್ಲೆಂಡ್‌ನ ಮಾಜಿ ಆಟಗಾರರ ಮೇಲೆ ಶಂಕೆ ವ್ಯಕ್ತಪಡಿಸಿದೆ. ಇಂಗ್ಲೆಂಡ್ ಮಾಜಿ ನಾಯಕರಾದ ಗ್ರೇಮ್ ಸ್ವಾನ್ ಮತ್ತು ಮೈಕಲ್ ವಾನ್‌ರಂತಹ ಮಾಜಿ ಆಟಗಾರರು ಇಂಗ್ಲೆಂಡ್ ತಂಡದ ದೌರ್ಬಲ್ಯಗಳನ್ನು ಬಹಿರಂಗ ಪಡಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ.

ಇಂಗ್ಲೆಂಡ್ ತಂಡದ ಹಾಲಿ ನಾಯಕರಾದ ಆಲಿಸ್ಟರ್ ಕುಕ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸುವ ಉದ್ದೇಶದಿಂದ ಭಾರತ ತಂಡಕ್ಕೆ ಈ ಮಾಜಿ ಆಟಗಾರರು ಇಂಗ್ಲೆಂಡ್ ತಂಡದ ದೌರ್ಬಲ್ಯಗಳ ಬಗ್ಗೆ ಮಾಹಿತಿ ನೀಡಿರಬಹುದು ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ.

ಬುಧವಾರ ಕಾರ್ಡಿಫ್‌ನಲ್ಲಿ ನಡೆದಿದ್ದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 133ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ಸುರೇಶ್ ರೈನಾ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 304 ರನ್‌ಗಳಿಸಿತ್ತು. ಈ ಗುರಿ ಬೆನ್ನುಹತ್ತಿದ ಇಂಗ್ಲೆಂಡ್ ತಂಡ ಕೇವಲ 161ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 133ರನ್‌ಗಳ ಹೀನಾಯ ಸೋಲು ಅನುಭಿವಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement