ಟೆಸ್ಟ್ ನೀರಸ ಡ್ರಾ; ಕಿವೀಸ್ ತೆಕ್ಕೆಗೆ ಸರಣಿ
ಎರಡನೇ ಟೆಸ್ಟ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಳ್ಳುವುದರೊಂದಿಗೆ ನ್ಯೂಜಿಲೆಂಡ್ ಪ್ರವಾಸವನ್ನು ಭಾರತ ಅತ್ಯಂತ ನಿರಾಶಾದಾಯಕವಾಗಿ ಪೂರ್ಣಗೊಳಿಸಿದೆ.
ವೆಲ್ಲಿಂಗ್ಟನ್: ಎರಡನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಳ್ಳುವುದರೊಂದಿಗೆ ನ್ಯೂಜಿಲೆಂಡ್ ಪ್ರವಾಸವನ್ನು ಭಾರತ ಅತ್ಯಂತ ನಿರಾಶಾದಾಯಕವಾಗಿ ಪೂರ್ಣಗೊಳಿಸಿದೆ. ಐದು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಂದರಲ್ಲೂ ಗೆಲವಿನ ರುಚಿ ಕಾಣದೇ ಜೋಲು ಮೋರೆ ಹೊತ್ತುಕೊಂಡು ಮಹೇಂದ್ರ ಸಿಂಗ್ ಧೋನಿ ಪಡೆ ಭಾರವಾದ ಹೆಜ್ಜೆಗಳೊಂದಿಗೆ ತವರಿಗೆ ಹಿಂತಿರುಗಬೇಕಾಗಿದೆ.
ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆದ ಮಂಗಳವಾರದ ಐದನೇ ಹಾಗೂ ಅಂತಿಮ ದಿನದಾಟದಲ್ಲಿ ನ್ಯೂಜಿಲೆಂಡ್ ನಾಯಕ ಬ್ರೆಂಡನ್ ಮೆಕಲಂ ತ್ರಿಶತಕ ಬಾರಿಸಿದ್ದೇ ಕೇಂದ್ರಬಿಂದುವಾಗಿತ್ತು. ಅವರ ಸಾಹಸಮಯ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 680 ರನ್ಗಳ ಬೃಹತ್ ಮೊತ್ತದೊಂದಿಗೆ ಡಿಕ್ಲೇರ್ ಘೋಷಿಸಿತ್ತು.
ತದನಂತರ ಮೊದಲ ಇನಿಂಗ್ಸ್ನಲ್ಲಿ 246 ರನ್ಗಳ ಮುನ್ನಡೆ ಸಾಧಿಸಿದ್ದರಿಂದ ಭಾರತಕ್ಕೆ ಅಂತಿಮ ದಿನ ಸುಮಾರು ಎರಡು ಅವಧಿಗಳಲ್ಲಿ 435 ರನ್ಗಳಿಸಬೇಕಾದ ಅಸಾಧ್ಯ ಸವಾಲು ಎದುರಾಯಿತು. ಅಂತಿಮವಾಗಿ ಭಾರತ 52 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್ಗಳಿಸಿದಾಗ ಉಭಯ ನಾಯಕರು ಡ್ರಾ ಫಲಿತಾಂಶಕ್ಕೆ ಸಮ್ಮತಿಸಿದರು.
ಭಾರತ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್ಮನ್ಗಳಾದ ಮುರಳಿ ವಿಜಯ್, ಶಿಖರ್ ಧವನ್ ಮತ್ತು ಚೇತೇಶ್ವರ್ ಪೂಜಾರ ಅವರನ್ನು 54 ರನ್ಗಳ ಅಂತರದಲ್ಲಿಯೇ ಕಳೆದುಕೊಂಡು ಕೊಂಚ ಒತ್ತಡದಲ್ಲಿತ್ತು. ಆದರೆ, ಮಧ್ಯಮ ಹಂತದಲ್ಲಿ ವಿರಾಟ್ ಕೊಹ್ಲಿ (ಅಜೇಯ 105, 135 ಎಸೆತ, 15 ಬೌಂಡರಿ, 1 ಸಿಕ್ಸರ್) ಮತ್ತು ರೋಹಿತ್ ಶರ್ಮಾ (ಅಜೇಯ 31) ಎಚ್ಚರಿಕೆಯಿಂದ ಆಡಿ ನ್ಯೂಜಿಲೆಂಡ್ಗೆ ಬೇಗನೆ ಮತ್ತೊಂದು ವಿಕೆಟ್ ಪಡೆಯಲು ಅವಕಾಶ ನೀಡದೇ ಪಂದ್ಯ ನೀರಸ ಡ್ರಾ ತಲುಪುವಂತೆ ಮಾಡಿದರು.
ವಿರಾಟ್ ಕೊಹ್ಲಿ 24ನೇ ಟೆಸ್ಟ್ನಲ್ಲಿ 6ನೇ ಶತಕ ಪೂರೈಸಿದರು. ಕೊಹ್ಲಿ ಒಮ್ಮೆ ಅಪಾಯದಿಂದ ಪಾರಾದರು. ಅವರು 23 ರನ್ಗಳಿಸಿದಾಗ ಟ್ರೆಟ್ ಬೌಲ್ಟ್ ಎಸೆತವೊಂದು ಬ್ಯಾಟಿನಂಚಿಗೆ ಬಡಿದು ಕ್ಯಾಚ್ ಆಗಿ ಪರಿವರ್ತನೆಗೊಂಡಿತ್ತು. ಆದರೆ, ಅಂಪೈರ್ ಸ್ಟೀವ್ ಡೇವಿಸ್ ಇದನ್ನು ಗುರುತಿಸುವಲ್ಲಿ ವಿಫಲರಾಗಿ ನಾಟೌಟ್ ತೀರ್ಪು ನೀಡಿದ್ದರು. ಇದರ ಪೂರ್ಣ ಲಾಭ ಪಡೆದುಕೊಂಡ ಕೊಹ್ಲಿ ಮೂರಂಕಿಯ ಗಡಿ ದಾಟಿ ಭಾರತಕ್ಕೆ ಆಪಾಯವಾಗದಂತೆ ನೋಡಿಕೊಂಡರು. ಆಕ್ಲೆಂಡ್ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು 40 ರನ್ಗಳಿಂದ ಗೆದ್ದುಕೊಂಡಿದ್ದ ಆತಿಥೇಯ ನ್ಯೂಜಿಲೆಂಡ್ ಆಟಗಾರರು 1-0 ಮುನ್ನಡೆಯೊಂದಿಗೆ ಟೆಸ್ಟ್ ಸರಣಿಯನ್ನೂ ತಮ್ಮದಾಗಿಸಿಕೊಂಡರು. ಈ ಮುನ್ನ ಐದು ಪಂದ್ಯಗಳ ಏಕದಿನ ಸರಣಿಯನ್ನು ಸಹ 4-0 ಮುನ್ನಡೆಯೊಂದಿಗೆ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದರು.
ಮೆಕಲಂ ಐತಿಹಾಸಿಕ ತ್ರಿಶತಕ
ಉಪಾಂತ್ಯ ದಿನದ ಮೊತ್ತ 6 ವಿಕೆಟ್ಗೆ 571 ರನ್ಗಳೊಂದಿಗೆ ಅಂತಿಮ ದಿನದಾಟ ಮುಂದುವರಿಸಿದ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು ಮತ್ತೆ ಖಾತೆಗೆ 109 ರನ್ ಸೇರಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ನ್ಯೂಜಿಲೆಂಡ್ ಬ್ಯಾಟಿಂಗ್ನಲ್ಲಿ ಕೇಂದ್ರಬಿಂದುವಾದ ನಾಯಕ ಬ್ರೆಂಡನ್ ಮೆಕಲಂ ಐತಿಹಾಸಿಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕೆಲ ದಾಖಲೆಗಳಿಗೆ ಭಾಜನರಾದರು. ನ್ಯೂಜಿಲೆಂಡ್ ಪರ ತ್ರಿಶತಕ ಬಾರಿಸಿದ ಮೊದಲ ಹಾಗೂ ಇನಿಂಗ್ಸ್ವೊಂದರಲ್ಲಿ ತಮ್ಮ ದೇಶದ ಪರ ವೈಯಕ್ತಿಕವಾಗಿ ಅತಿ ಹೆಚ್ಚು ರನ್ಗಳಿಸಿದ ಆಟಗಾರನೆಂಬ ದಾಖಲೆಗೆ ಭಾಜನರಾದರು.
ಭಾರತದ ದಾಳಿಯನ್ನು ತಮಗಿಷ್ಟ ಬಂದಂತೆ ಪುಡಿಗಟ್ಟಿದ ಮೆಕಲಂ 775 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದು 559 ಎಸೆತಗಳಲ್ಲಿ 32 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡಂತೆ 54.02ರ ಸ್ಟ್ರೈಕ್ರೇಟ್ನಲ್ಲಿ 302 ರನ್ ಸಿಡಿಸಿದರು. ಅಂತಿಮವಾಗಿ ಅವರು ಎಡಗೈ ಮಧ್ಯಮ ವೇಗಿ ಜಹೀರ್ ಖಾನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಕ್ಯಾಚ್ ನೀಡಿ ಮರಳಿದರು.
ನ್ಯೂಜಿಲೆಂಡ್ ಪರ ಈ ಮುನ್ನ 1991ರಲ್ಲಿ ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಮಾಜಿ ನಾಯಕ ಮಾರ್ಟಿನ್ ಕ್ರೋವ್ 299 ರನ್ ಗಳಿಸಿದ್ದು ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿತ್ತು.
ಈ ಮಧ್ಯೆ ಐದನೇ ಕ್ರಮಾಂಕದ ಬ್ಯಾಟ್ಸ್ಮನ್ವೊಬ್ಬ ದಾಖಲಿಸಿದ ಮೂರನೇ ವೈಯಕ್ತಿಕ ಗರಿಷ್ಠ ಮೊತ್ತದ ದಾಖಲೆಯೂ ಮೆಕಲಂನದ್ದಾಯಿತು. ಆಸ್ಟ್ರೇಲಿಯಾದ ಮೈಕೆಲ್ ಕ್ಲಾರ್ಕ್ (2012ರಲ್ಲಿ ಭಾರತದ ವಿರುದ್ಧ ಅಜೇಯ 329) ಮತ್ತು ಸರ್ ಡಾನ್ ಬ್ರಾಡ್ಮನ್ (1934ರಲ್ಲಿ ಇಂಗ್ಲೆಂಡ್ ವಿರುದ್ಧ 304ರನ್) ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಅಷ್ಟೇ ಅಲ್ಲದೆ ಎರಡನೇ ಇನಿಂಗ್ಸ್ನಲ್ಲಿ ದಾಖಲಾದ ಎರಡನೇ ವೈಯಕ್ತಿಕ ಸಾಧನೆ ಕೂಡ ಹೌದು. ಹನೀಫ್ ಮೊಹಮ್ಮದ್ 1958ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 337 ರನ್ಗಳಿಸಿದ್ದು ಮೊದಲ ಸಾಧನೆ ಎನಿಸಿದೆ.
ಮೆಕಲಂ ಜೊತೆಗೆ ಮತ್ತೊಂದು ತುದಿಯಲ್ಲಿದ್ದ ಜಿಮ್ಮಿ ನೀಶಂ ಸಹ ಪದಾರ್ಪಣೆ ಮಾಡಿದ ಟೆಸ್ಟ್ನಲ್ಲಿಯೇ ಶತಕ ಬಾರಿಸಿ ಯಶಸ್ವಿಯಾಗಿ ಟೆಸ್ಟ್ ರಂಗ ಪ್ರವೇಶಿಸಿದಂತಾಯಿತು. ಭಾರತೀಯ ಬೌಲರ್ಗಳ ಎಸೆತಗಳಿಗೆ ತೀಕ್ಷ್ಣ ಉತ್ತರಗಳನ್ನೇ ನೀಡಿದ ನೀಶಂ 154 ಎಸೆತಗಳಲ್ಲಿ 20 ಬೌಂಡರಿ ಸೇರಿದಂತೆ 137 ರನ್ಗಳಿಸಿ ಔಟಾಗದೇ ಉಳಿದರು. ಮೆಕಲಂ ಮತ್ತು ನೀಶಂ ಏಳನೇ ವಿಕೆಟ್ಗೆ 179 ರನ್ ಕಲೆಹಾಕಿದರು.
ಈ ಮಧ್ಯೆ ಭಾರತೀಯ ಬೌಲರ್ಗಳ ಕಳಪೆ ಪ್ರದರ್ಶನ ಮುಂದುವರಿಯಿತು. ಜಹೀರ್ ಖಾನ್ 5 ವಿಕೆಟ್ ಪಡೆದು ಸ್ವಲ್ಪ ಪ್ರಭಾವ ಬೀರಿದ್ದು ಬಿಟ್ಟರೆ, ಉಳಿದವರ ದಯನೀಯ ವೈಫಲ್ಯದಿಂದಾಗಿ ಮೊದಲ ಮೂರು ದಿನ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರೂ, ಪ್ರಯೋಜನವಾಗದಂತಾಯಿತು.
ಸ್ಕೋರ್ ವಿವರ
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 192
ಭಾರತ ಮೊದಲ ಇನಿಂಗ್ಸ್ 438
ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ 8 ವಿಕೆಟ್ಗೆ 680 ಡಿಕ್ಲೇರ್ (ನಿನ್ನೆ 6ಕ್ಕೆ571ರಿಂದ ಮುಂದುವರಿದಿದೆ)
ಬ್ರೆಂಡನ್ ಮೆಕಲಂ ಸಿ ಧೋನಿ ಬಿ ಜಹೀರ್ 302
ಜಿಮ್ಮಿ ನೀಶಂ ಅಜೇಯ 137
ಟಿಮ್ ಸೌಥಿ ಸಿ ಪೂಜಾರ ಬಿ ಜಹೀರ್ 11
ನೀಲ್ ವ್ಯಾಗ್ನರ್ ಅಜೇಯ 2
ಇತರೆ: (ಬೈ-9, ಲೆಗ್ಬೈ-12, ವೈ-2, ನೋಬಾಲ್-7) 30.
ವಿಕೆಟ್ ಪತನ: 1-1, 2-27, 3-52, 4-87, 5-94, 6-446, 7-625, 8-639.
ಬೌಲಿಂಗ್ ವಿವರ
ಇಶಾಂತ್ ಶರ್ಮಾ 45-4-164-0, ಜಹೀರ್ ಖಾನ್ 51-13-170-5, ಮೊಹಮದ್ ಶಮಿ 43-6-149-2, ರವೀಂದ್ರ ಜಡೇಜಾ 52-11-115-1, ರೋಹಿತ್ ಶರ್ಮಾ 11-0-40-0, ವಿರಾಟ್ ಕೊಹ್ಲಿ 6-1-13-0, ಮಹೇಂದ್ರ ಸಿಂಗ್ ಧೋನಿ 1-0-5-0, ಶಿಖರ್ ಧವನ್ 1-0-3-0.
ಭಾರತ ಎರಡನೇ ಇನಿಂಗ್ಸ್ 52 ಓವರುಗಳಲ್ಲಿ 3 ವಿಕೆಟ್ಗೆ 166
ವಿಜಯ್ ಸಿ ಆ್ಯಂಡರ್ಸನ್ ಬಿ ಸೌಥಿ 7
ಧವನ್ ಎಲ್ಬಿ ಬಿ ಬೌಲ್ಟ್ 2,
ಪೂಜಾರ ಸಿ ವಾಟ್ಲಿಂಗ್ ಬಿ ಸೌಥಿ 17
ವಿರಾಟ್ ಕೊಹ್ಲಿ ಅಜೇಯ 105
ರೋಹಿತ್ ಶರ್ಮಾ ಅಜೇಯ 31
ಇತರೆ: (ವೈ-2, ನೋಬಾಲ್-2) 4.
ವಿಕೆಟ್ ಪತನ: 1-10, 2-10, 3-54.
ಬೌಲಿಂಗ್ ವಿವರ
ಟ್ರೆಂಟ್ ಬೌಲ್ಟ್ 16-5-47-1, ಟಿಮ್ ಸೌಥಿ 16-3-50-2, ನೀಲ್ ವ್ಯಾಗ್ನರ್ 11-3-38-0, ಜಿಮ್ಮಿ ನೀಶಂ 5-0-25-0, ಕೋರೆ ಆ್ಯಂಡರ್ಸನ್ 4-1-6-0.