ತಂಡದ ಭಾಗವಾಗಿದ್ದು ಲಕ್-ರೋನಿತ್ ಮೋರೆ
14 ವರ್ಷಗಳ ವನವಾಸದ ನಂತರ ರಣಜಿ ಟ್ರೋಫಿ ಗೆದ್ದ ತಂಡ, ಸಂಭ್ರಮಿಸಿದ ಅಪರೂಪದ ಕ್ಷಣಗಳ ಭಾಗವಾಗಿದ್ದು ನನ್ನ ಅದೃಷ್ಟ ಎಂದು ನನಗನಿಸುತ್ತಿದೆ. ಹೈದರಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ಗೆದ್ದಾಗ, ಟ್ರೋಫಿ ಸ್ವೀಕರಿಸುವುದಕ್ಕಿಂತ ಮುನ್ನ ಆಟಗಾರರ ಸಂಭ್ರಮವನ್ನು ವರ್ಣಿಸಲು ಪದಗಳೇ ಇಲ್ಲ.
ಪಂದ್ಯಾವಳಿಯಲ್ಲಿ ಈ ಬಾರಿ ನನಗೆ 3ನೇ ಪಂದ್ಯದಲ್ಲಿ ಅವಕಾಶ ಸಿಕ್ಕಿತು. ಒಟ್ಟು ಮೂರು ಪಂದ್ಯಗಳಲ್ಲಿ ನಾನು ಪ್ರದರ್ಶನ ನೀಡಿದೆ. ಎಲ್ಲ ಪಂದ್ಯಗಳಲ್ಲೂ ಸಾಧ್ಯವಾದಷ್ಟು ಶ್ರೇಷ್ಠ ಪ್ರದರ್ಶನ ನೀಡಿದ ತೃಪ್ತಿ ನನಲ್ಲಿದೆ.
ಹರ್ಯಾಣ ವಿರುದ್ಧ ನಡೆದ ಪಂದ್ಯ ನನಗೆ ಕೊಂಚ ಸವಾಲಿನದಾಗಿತ್ತು. ಕಾರಣ, ಅಲ್ಲಿ ನನಗೆ ನ್ಯೂ ಬಾಲ್ ನೀಡಲಾಗಿತ್ತು. ಅದನ್ನು ನನಗೆ ಮೊದಲೇ ತಿಳಿಸಲಾಗಿತ್ತು. ಹೀಗಾಗಿ ಒಂದೆಡೆ ಭೀತಿಯಿದ್ದರೂ, ನಿರ್ಭೀತಿಯಿಂದ ಪ್ರದರ್ಶನ ನೀಡುವ ಮೂಲಕ ಕೇವಲ 20 ರನ್ ನೀಡಿ 5 ವಿಕೆಟ್ ಪಡೆದು ಶ್ರೇಷ್ಠ ಪ್ರದರ್ಶನ ನೀಡಿದ್ದು ಪಂದ್ಯಾವಳಿಯಲ್ಲಿ ಮರೆಯಲಾರದ ಕ್ಷಣ.
ಸಾಂಘಿಕ ಪ್ರದರ್ಶನ ಎಂದರೆ ಏನು ಎಂಬುದನ್ನು ಕರ್ನಾಟಕ ತಂಡವನ್ನು ನೋಡಿ ಕಲಿಯುವಂತಿತ್ತು, ಈ ಬಾರಿ ರಾಜ್ಯ ತಂಡ ನೀಡಿದ ಪ್ರದರ್ಶನ. ಅಲ್ಲದೆ, ಇದೇ ರೀತಿಯ ಸಾಂಘಿಕ ಪ್ರದರ್ಶನವನ್ನು ಮುಂದುವರಿಸಿದರೆ, ಯಾವುದೇ ಮಹತ್ವದ ತಂಡದ ವಿರುದ್ಧ ಜಯ ಸಾಧಿಸುವುದು ಕಠಿಣವಾಗಲಾರದು ಎಂಬುದು ನನ್ನ ಅನಿಸಿಕೆ.
-ನಿರೂಪಣೆ: ಮಲ್ಲಿಕಾರ್ಜುನ ಕರಿಯಪ್ಪನವರ