ಪಂಕಜ್ ಆಡ್ವಾಣಿಗೆ ಸನ್ಮಾನ
ಬೆಂಗಳೂರು: ವಿಶ್ವ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಎಲ್ಲಾ ಮಾದರಿಯ ವಿಶ್ವಚಾಂಪಿಯನ್ಶಿಪ್ ಗೆದ್ದ ಏಕೈಕ ಆಟಗಾರ ಎಂಬ ವಿಶ್ವದಾಖಲೆ ಬರೆದ ಪಂಕಜ್ ಅಡ್ವಾಣಿಗೆ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ ಸನ್ಮಾನ ಮಾಡಿದೆ.
ಶುಕ್ರವಾರ ನಡೆದ ಸಮಾರಂಭದಲ್ಲಿ ಪಂಕಜ್ ಅಡ್ವಾಣಿ ಸೇರಿದಂತೆ ವಿದ್ಯಾ ಪಿಳ್ಳೈ, ಉಮಾದೇವಿ ಹಾಗೂ ಚಿತ್ರಾ ಮಗಿಮೈರಾಜ್ ಅವರಿಗೂ ಸಂಸ್ಥೆ ಸನ್ಮಾನಿಸಿತು.
ಪಂಕಜ್ ಹಾಗೂ ವಿದ್ಯಾ ಪಿಳ್ಳೈ ಅವರಿಗೆ ರಾಜ್ಯ ಕ್ರೀಡಾ ಸಚಿವರಾದ ಅಭಯ್ ಚಂದ್ರಜೈನ್ ಅವರು ಪುಷ್ಪ ಗುಚ್ಛ ಹಾಗೂ ನಗದು ಬಹುಮಾನ ನೀಡುವ ಮೂಲಕ ಸನ್ಮಾನಿಸಲಾಯಿತು. ಇನ್ನು ಉಮಾದೇವಿ ಹಾಗೂ ಚಿತ್ರಾ ಅವರಿಗೆ ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆಯ ನಿರ್ದೇಶಕರಾದ ವಿಕಾಸ್ ಸಿಂಗ್ ಸನ್ಮಾನ ಮಾಡಿದರು.
ಪಂಕಜ್ ಒಟ್ಟು 9 ಬಾರಿ ವಿಶ್ವ ಚಾಂಪಿಯನ್ಶಿಪ್ ಕಿರೀಟ ಮುಡೇಗೇರಿಸಿಕೊಂಡರೆ, ವಿದ್ಯಾ ಪಿಳ್ಳೈ ಈಜಿಪ್ಟ್ನಲ್ಲಿ ನಡೆದ 15 ರೆಡ್ ತಂಡಗಳ ಸ್ನೂಕರ್ನಲ್ಲಿ ಕಂಚಿನ ಪದಕ ಪಡೆದಿದ್ದರು.
ಪಂಕಜ್ಗೆ ರು. 75 ಸಾವಿರ, ವಿದ್ಯಾಗೆ 15 ಸಾವಿರ, ಚಿತ್ರಾ ಅವರಿಗೆ 60 ಸಾವಿರ ಹಾಗೂ ಉಮಾದೇವಿಗೆ ರು. 40 ಸಾವಿರ ನಗದು ಬಹುಮಾನ ನೀಡಲಾಯಿತು.