ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಂಬಲ್ಡನ್ ಹಸಿರು ಅಂಗಣದ ರಾಣಿ ಕ್ವಿಟೋವಾ

ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಜೀವನದ ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

Srinivasa Murthy VN
Updated On : 5 Jul 2014, 11:52 am

ಲಂಡನ್: ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಜೀವನದ ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ 6-3, 6-0 ನೇರ ಸೆಟ್‌ಗಳಿಂದ ಕೆನಡಾದ ಯೂಗೆನಿ ಬುಚರ್ಡ್ ಅವರನ್ನು ಸುಲಭವಾಗಿ ಮಣಿಸಿ ಈ ಸಾಧನೆ ಮಾಡಿದರು. ಆ ಮೂಲಕ ಎರಡನೇ ಬಾರಿಗೆ ಪ್ರತಿಷ್ಠಿತ ವಿಂಬಲ್ಡನ್ ಪ್ರಶಸ್ತಿಯನ್ನು ಅವರು ತಮ್ಮದಾಗಿಸಿಕೊಂಡರು.
ಈ ಮುನ್ನ 2011ರಲ್ಲಿ ಇದೇ ಅಂಗಣದಲ್ಲಿ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಭಾಜನರಾಗಿ ತಮ್ಮ ಛಾಪು ಮೂಡಿಸಿದ್ದ ಕ್ವಿಟೋವಾ, ಈ ಬಾರಿ ಸರಳವಾಗಿ ಎದುರಾಳಿಯ ಸವಾಲನ್ನು ಹತ್ತಿಕ್ಕುವ ಮೂಲಕ ಮತ್ತೆ ಹಳೆಯ ಸಾಧನೆಯನ್ನು ಪುನರಾವರ್ತಿಸಿದರು.
ಕೇವಲ 55 ನಿಮಿಷಗಳ ಆಟದಲ್ಲಿಯೇ ಜೆಕ್ ಗಣರಾಜ್ಯದ ಆಟಗಾರ್ತಿಗೆ ಚಾಂಪಿಯನ್ ಪಟ್ಟ ಒಲಿದುಬಂದಿತು. ಮೊದಲ ಸೆಟ್‌ನ 32 ನಿಮಿಷಗಳ ಆಟದಲ್ಲಿ 13ನೇ ಶ್ರೇಯಾಂಕಿತೆ ಬುಚರ್ಡ್ ಮೂರು ಗೇಮ್‌ಗಳನ್ನು ಗೆದ್ದುಕೊಂಡು ಎದುರಾಳಿಗೆ ಸ್ವಲ್ಪ ಪ್ರತಿರೋಧ ಒಡ್ಡಿದ್ದರು.
ಆದರೆ, ಎರಡನೇ ಸೆಟ್‌ನಲ್ಲಿ ಮಾತ್ರ ಒಂದೂ ಗೇಮ್ ಗೆದ್ದುಕೊಳ್ಳದ ಕೆನಡಾ ಆಟಗಾರ್ತಿ ಕೇವಲ 23 ನಿಮಿಷಗಳ ಆಟದಲ್ಲಿಯೇ ಸೋಲಿನ ಕಹಿ ಉಂಡು ರನ್ನರ್ ಅಪ್ ಪ್ರಶಸ್ತಿಗಷ್ಟೇ ತೃಪ್ತಿ ಹೊಂದಬೇಕಾಯಿತು.
ಕಳೆದ 2013ರಲ್ಲಷ್ಟೇ ಗ್ರ್ಯಾನ್ ಸ್ಲಾಮ್ ಋತುವಿಗೆ ಪ್ರವೇಶ ಮಾಡಿದ್ದ ಬುಚರ್ಡ್, ಈ ಬಾರಿಯ ಎರಡನೇ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲಾರಂಭಿಸಿದ್ದರು. ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯನ್ ಓಪನ್ ಹಾಗೂ ನಂತರದ ಫ್ರೆಂಚ್ ಓಪನ್‌ಗಳೆರಡರಲ್ಲೂ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದರು. ಈಗ ಮೂರನೇ ಗ್ರ್ಯಾನ್ ಸ್ಲಾಮ್‌ನಲ್ಲಿ ಫೈನಲ್ ತಲುಪುವ ಮೂಲಕ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯುವ ಆಸೆ ಹೊಂದಿದ್ದರು. ಆದರೆ, ಕ್ವಿಟೋವಾರ ಅನುಭವದ ಮುಂದೆ ಉತ್ತರಕ್ಕೆ ತಡಕಾಡಿದ ಬುಚರ್ಡ್‌ಗೆ ಅಂತಿಮವಾಗಿ ನಿರಾಸೆ ಕಾದಿತ್ತು.
ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಹಾಗೂ ಫ್ರೆಂಚ್ ಓಪನ್‌ನಲ್ಲಿ ಮೂರನೇ ಸುತ್ತಿನಲ್ಲೇ ಹೊರಬಿದ್ದಿದ್ದ ಜೆಕ್ ಆಟಗಾರ್ತಿ ಇಲ್ಲಿ ಮಾತ್ರ ಪ್ರಶಸ್ತಿ ಗೆದ್ದು ಅಚ್ಚರಿ ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement