ವಿಳಂಬವಾದ ಕ್ರೀಡಾ ಬಜೆಟ್ ಏರಿಕೆ ವ್ಯರ್ಥ?
ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ಕ್ರೀಡೆಗೆ ಘೋಷಸಿರುವ ರು. 100 ಕೋಟಿ ಹಣವನ್ನು, ಬರುವ ಜುಲೈ 23ರಿಂದ ಆಗಸ್ಟ್ 3ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ಗೆ ತಯಾರಿಗೆ ಬಳಸಿಕೊಳ್ಳಲು ಸಮಯ ಮೀರಿದೆ ಎಂದು ಭಾರತೀಯ ಕ್ರೀಡಾ ವಲಯ ಅಭಿಪ್ರಾಯಪಟ್ಟಿದೆ. 'ವರ್ಷವೊಂದಕ್ಕೆ ರು. 3ರಿಂದ 4 ಕೋಟಿ ಹೆಚ್ಚಳವಾಗುತ್ತಿದ್ದ ಹಣವನ್ನು ಒಂದೇ ಬಾರಿಗೆ ರು. 100 ಕೋಟಿಗೆ ಹೆಚ್ಚಳ ಮಾಡಿರುವುದು ಬೃಹತ್ ಮೊತ್ತಕ್ಕೆ ಏರಿಸಿರುವುದು ಅವಾಸ್ತವವಾಗಿದೆ. ಆದರೆ, ಕೇವಲ ಎರಡು ವಾರವಷ್ಟೇ ಬಾಕಿ ಇರುವ ಕಾಮನ್ವೆಲ್ತ್ ಗೇಮ್ಸ್ ಮತ್ತು ಮುಂಬರುವ ಏಷ್ಯನ್ ಗೇಮ್ಸ್ಗೆ ಈ ಹಣವನ್ನು ಬಳಸಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ' ಎಂದು ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ ಅಧಿಕಾರಿಯೊಬ್ಬರು ಪ್ರಶ್ನ್ನಿಸಿದ್ದಾರೆ.
ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆಯಲಿರುವ 17 ವಿಭಾಗಗಳ ಪೈಕಿ 13ರಲ್ಲಿ ಭಾರತ ಭಾಗವಹಿಸಲಿದೆ. ಗುರುವಾರ ಮಂಡಿಸಲಾದ ಕೇಂದ್ರ ಬಜೆಟ್ನಲ್ಲಿ ಕ್ರೀಡೆಗೆ ರು. 100 ಕೋಟಿ ಘೋಷಿಸಲಾಗಿದ್ದು, ಅಥ್ಲೀಟ್ಗಳ ಹಿತದೃಷ್ಟಿಯಿಂದ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗೆ ರು. 185 ಕೋಟಿ ಮೀಸಲಿರಿಸಲಾಗಿದೆ.