ಗ್ಲಾಸ್ಗೋಗೆ 224 ಅಥ್ಲೀಟ್‌ಗಳು
ನವದೆಹಲಿ: ಬರುವ ಜುಲೈ 23ರಿಂದ ಆಗಸ್ಟ್ 3ರವರೆಗೆ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತ 224 ಅಥ್ಲೀಟ್‌ಗಳ ದಂಡನ್ನು ಕಳುಹಿಸಿಕೊಡುತ್ತಿದೆ. ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದು ಭಾರತದ ಎರಡನೇ ಅತಿ ದೊಡ್ಡ ದಂಡಾಗಿದೆ.
ಈ ಮೊದಲು 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತ 495 ಅಥ್ಲೀಟ್‌ಗಳನ್ನು ಅಂಗಣಕ್ಕಿಳಿಸಿತ್ತು.14 ವಿಭಾಗಗಳಲ್ಲಿ ಭಾಗವಹಿಸುತ್ತಿರುವ 224 ಅಥ್ಲೀಟ್‌ಗಳಿಗೆ ಕ್ರೀಡಾಕೂಟಕ್ಕೆ ತೆರಳಲು ಕ್ರೀಡಾ ಸಚಿವಾಲಯ ಅನುಮತಿ ನೀಡಿದೆ. ಇದರಲ್ಲಿ ಏಳು ಪ್ಯಾರಾ ಅಥ್ಲೀಟ್‌ಗಳು, 90 ಜನ ಅಧಿಕಾರಿಗಳು, ಕೋಚ್‌ಗಳು ಹಾಗೂ ಸಹ ಸಿಬ್ಬಂದಿ ಇದರಲ್ಲಿ ಸೇರಿದ್ದಾರೆ.
ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಒಟ್ಟು 17 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 261 ಪದಕಗಳನ್ನು ಹೊಂದಿದೆ. ನೆಟ್ಬಾಲ್, ರಗ್ಬಿ ಸೆವೆನ್ಸ್ ಹಾಗೂ ಟ್ರಯಥ್ಲಾನ್‌ನಲ್ಲಿ ಮಾತ್ರ ಭಾರತ ತನ್ನ ಅಥ್ಲೀಟ್‌ಗಳನ್ನು ಅಂಗಣಕ್ಕಿಳಿಸಿಲ್ಲ. ಪ್ಯಾರಾ ಅಥ್ಲೀಟ್‌ಗಳು (ಅಥ್ಲೆಟಿಕ್ಸ್, ಸೈಕ್ಲಿಂಗ್, ಲಾನ್ ಬೌಲ್ಸ್, ಈಜು ಹಾಗೂ ವೇಟ್‌ಲಿಫ್ಟಿಂಗ್) ಐದು ವಿಭಾಗಗಳಲ್ಲಿ ಒಟ್ಟು 22 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಒಟ್ಟು 21 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದರೆ, 271 ಪದಕಗಳನ್ನು ನೀಡಲಾಗಿತ್ತು. ಆಗ ಭಾರತ ದಾಖಲೆ ಸಂಖ್ಯೆ ಅಥ್ಲೀಟ್‌ಗಳನ್ನು ಅಂಗಣಕ್ಕಿಳಿಸಿತ್ತು. ಆ ಕೂಟದಲ್ಲಿ ಭಾರತ ಒಟ್ಟು 101 (38 ಚಿನ್ನ, 27 ಬೆಳ್ಳಿ ಹಾಗೂ 36 ಕಂಚಿನ) ಪದಕಗಳನ್ನು ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ ಮೊದಲ ಸ್ಥಾನ ಪಡೆದರೆ, ಭಾರತ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು.ಕನಿಷ್ಟ 8ರಿಂದ 10 ಪದಕಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿರುವ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಹೆಚ್ಚಿನ ಕ್ರೀಡಾಪಟುಗಳು ಇದ್ದು, 16 ಪುರುಷರು ಮತ್ತು 16 ವನಿತೆಯರನ್ನು ಹೊಂದಿರುವ ಹಾಕಿ ತಂಡ ಎರಡನೇ ಹೆಚ್ಚಿನ ಸಂಖ್ಯೆ ಹೊಂದಿದೆ.