ಭಾರತಕ್ಕೆ ಆರಂಭಿಕ ಆಘಾತ
ಬ್ರಿಸ್ಬೇನ್: ಮೊದಲ ದಿನ ಕೆಚ್ಚೆದೆಯ ಹೋರಾಟ ನಡೆಸಿದ್ದ ಭಾರತ 'ಎ' ತಂಡಕ್ಕೆ, 2ನೇ ಅನಧಿಕೃತ ಟೆಸ್ಟ್‌ನ 2ನೇ ದಿನ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬೆನ್ ಕಟಿಂಗ್ ಮತ್ತು ಬೌಲಿಂಗ್‌ನಲ್ಲಿ ವೇಗಿ ಚಡ್ ಸಾಯೆರ್ಸ್ ಅವರು ದೊಡ್ಡ ಪೆಟ್ಟು ನೀಡಿದ್ದಾರೆ.
ಶತಕವಂಚಿತರಾದ ಕಟಿಂಗ್ (96) ಅದ್ಭುತ ಬ್ಯಾಟಿಂಗ್ ನೆರವಿನೊಂದಿಗೆ, ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 473 ರನ್ ಕಲೆ ಹಾಕಿತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ 'ಎ' ತಂಡ, ಇದಕ್ಕೆ ಉತ್ತರವಾಗಿ ದಿನಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 165 ರನ್ ಕಲೆ ಹಾಕಿದೆ. ಮನೋಜ್ ತಿವಾರಿ (ಅಜೇಯ 50) ಮತ್ತು ಬಾಬಾ ಅಪರಾಜಿತ (ಅಜೇಯ 20) ಕ್ರೀಸ್‌ನಲ್ಲಿದ್ದರು.ಆರಂಭಿಕ ಆಘಾತ: ಭಾರತ ಬ್ಯಾಟಿಂಗ್ ಆರಂಭಿಸಿದ ತಕ್ಷಣ, ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ (10) ಅವರು, ಚಡ್ಡ ಸಾಯೆರ್ಸ್ ಬೌಲಿಂಗ್‌ನಲ್ಲಿ ನಾಥನ್ ಲೀಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆದರೆ, ಇನ್ನೊಬ್ಬ ಆರಂಭಿಕ ಆಟಗಾರ ಲೊಕೇಶ್ ರಾಹುಲ್ (52) ಅರ್ಧ ಶತಕ ಪೂರೈಸುತ್ತಿದ್ದಂತೆಯೇ ಅವರನ್ನು ಬೌಲ್ಡ್ ಮಾಡಿದ ಸಾಯೆರ್ಸ್ ಭಾರತಕ್ಕೆ ಮತ್ತೊಂದು ಪೆಟ್ಟು ನೀಡಿದರು. ರಾಹುಲ್ ವಿಕೆಟ್ ಪಡೆಯುವ ಮುನ್ನ 26ನೇ ಓವರ್‌ನಲ್ಲಿ ಜೀವನ್‌ಜೋತ್ ಸಿಂಗ್ (29) ವಿಕೆಟ್ ಕಬಳಿಸುವಲ್ಲೂ ಸಾಯೆರ್ಸ್ ಯಶಸ್ವಿಯಾಗಿದ್ದರು. ಕೆ.ಎಲ್ ರಾಹುಲ್ ಅವರಿಗೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8ನೇ ಅರ್ಧ ಶತಕವಾಗಿತ್ತು.
ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ ದಿಟ್ಟ ಉತ್ತರ ನೀಡಬೇಕಾದರೆ, 7 ವಿಕೆಟ್ ಉಳಿಸಿಕೊಂಡಿರುವ ಭಾರತ ಇನ್ನೂ 258 ರನ್ ಗಳಿಸಬೇಕಾಗಿದೆ. 102 ಎಸೆತಗಳನ್ನು ಎದುರಿಸಿದ ಕೆ.ಎಲ್ ರಾಹುಲ್ ಅರ್ಧ ಶತಕದಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿದ್ದವು. ಜೀವನ್‌ಜೋತ್ ಸಿಂಗ್ ಅವರೊಂದಿಗೆ 2ನೇ ವಿಕೆಟ್‌ಗೆ 67 ರನ್ ಕಲೆ ಹಾಕಿದರು. ದಿನಾಂತ್ಯದಲ್ಲಿ ಕ್ರೀಸ್‌ನಲ್ಲಿದ್ದ ಅಪರಾಜಿತ ಮತ್ತು ತಿವಾರಿ ಜತೆಯಾಟದಲ್ಲಿ 69 ರನ್ ಕಲೆ ಹಾಕಿದ್ದು, 3ನೇ ದಿನ ತಂಡಕ್ಕೆ ತಕ್ಕ ಬ್ಯಾಟಿಂಗ್ ನಡೆಸುವ ಭರವಸೆ ಮೂಡಿಸಿದ್ದಾರೆ.
ಆಸ್ಟ್ರೇಲಿಯಾ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಸಾಯೆರ್ಸ್ 22 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇದಕ್ಕೂ ಮುನ್ನ 423 ರನ್ ಕಲೆ ಹಾಕಿದ ಆಸ್ಟ್ರೇಲಿಯಾ ವಿರುದ್ಧ ಭಾರತದ ಉಮೇಶ್ ಯಾದವ್ 5 ವಿಕೆಟ್ ಕಬಳಿಸಿದರೆ, ಅಮಿತ್ ಮಿಶ್ರಾ 4 ವಿಕೆಟ್ ಹಾಗೂ ಬಾಬಾ ಅಪಾರಾಜಿತ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ 'ಎ' ಮೊದಲ ಇನಿಂಗ್ಸ್ 423 ಭಾರತ 'ಎ' ಮೊದಲ ಇನಿಂಗ್ಸ್ 163/3
ಕೆ.ಎಲ್ ರಾಹುಲ್ 52, ಮನೋಜ್ ತಿವಾರಿ ಅಜೇಯ 50, ಬೌಲಿಂಗ್: ಸಾಯೆರ್ಸ್ 3/22