ಕ್ವಾರ್ಟರ್ ಪ್ರವೇಶಿಸಿದ ಸುಮಿತ್, ಮನೋಜ್
ಗ್ಲಾಸ್ಗೊ: ಆರಂಭಿಕ ಪಂದ್ಯದಲ್ಲಿ ಅರ್ಹ ಗೆಲವಿನೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತನ್ನ ಅಭಿಯಾನ ಆರಂಭಿಸಿರುವ ಭಾರತದ ಬಾಕ್ಸರ್ ಸುಮಿತ್ ಸಂಗ್ವಾನ್ ಕ್ವಾರ್ಟರ್ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ. ಭಾನುವಾರ ನಡೆದ ಪುರುಷರ 81 ಕೆ.ಜಿ ವಿಭಾಗದ ಪಂದ್ಯದಲ್ಲಿ ಸುಮಿತ್ ಎದುರಾಳಿ ಮೊಹಮದ್ ಹಕಿಮು ವಿರುದ್ಧ 3-0 ಅಂತರದ ಸುಲಭ ಗೆಲವು ದಾಖಲಿಸಿದರು. ಈ ಮೂಲಕ ಸುಮಿತ್ ಮುಂದಿನ ಸುತ್ತಿನಲ್ಲಿ ನ್ಯೂಜಿಲೆಂಡ್ನ ಡೇವಿಸ್ ನಿಕ ವಿರುದ್ಧ ಸೆಣೆಸಲಿದ್ದಾರೆ. ಇನ್ನು ಭಾರತದ ಮತ್ತೊಬ್ಬ ಬಾಕ್ಸರ್ ಮನೋಜ್ ಕುಮಾರ್ ಪುರುಷರ 64 ಕೆ.ಜಿ ವಿಭಾಗದ ಪಂದ್ಯದಲ್ಲಿ ಕೆನಡಾದ ಆರ್ಥುರ್ ಬಿಯರ್ಸ್ಲನೊವ್ ವಿರುದ್ಧ 2-0 ಅಂತರದಿಂದ ಗೆಲವು ದಾಖಲಿಸಿದರು. ಈ ಮೂಲಕ ಮನೋಜ್ ಮುಂದಿನ ಪಂದ್ಯದಲ್ಲಿ ಬ್ರಿಟನ್ನ ಸ್ಯಾಮ್ಯುಯೆಲ್ ಮ್ಯಾಕ್ಸ್ವೆಲ್ ವಿರುದ್ಧ ಕಾದಾಟ ನಡೆಸಲಿದ್ದಾರೆ.