ಚಿನ್ನ ಗೆದ್ದ ಸತೀಶ್
ಪ್ರಸಕ್ತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ನಿರಂತರವಾಗಿ ಪದಕ ತಂದುಕೊಡುತ್ತಿರುವ ವೇಟ್‌ಲಿಫ್ಟರ್‌ಗಳು ಮತ್ತೊಮ್ಮೆ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಗ್ಲಾಸ್ಗೋ: ಪ್ರಸಕ್ತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ನಿರಂತರವಾಗಿ ಪದಕ ತಂದುಕೊಡುತ್ತಿರುವ ವೇಟ್‌ಲಿಫ್ಟರ್‌ಗಳು ಮತ್ತೊಮ್ಮೆ ಹೆಮ್ಮೆಯ ಸಾಧನೆ ಮಾಡಿದ್ದಾರೆ. ಪುರುಷರ 77 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಸತೀಶ್ ಶಿವಲಿಂಗಮ್ ಚಿನ್ನದ ಪದಕ ಪಡೆದರೆ, ರವಿ ಕಟುಲು ಬೆಳ್ಳಿ ಪದಕ ಪಡೆದಿದ್ದಾರೆ.
ಭಾನುವಾರ ತಡ ರಾತ್ರಿ ನಡೆದ ಸ್ಪರ್ಧೆಯಲ್ಲಿ 22 ವರ್ಷದ ಸತೀಶ್ ಒಟ್ಟು 328 (142-179) ಕೆ.ಜಿ ಎತ್ತುವ ಮೂಲಕ ಚಿನ್ನದ ಪದಕವನ್ನು ಸಂಪಾದಿಸಿದರು. ಇನ್ನು 2010ರ ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದ ರವಿ, ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಒಟ್ಟು 314(137-177) ಕೆ.ಜಿಯನ್ನು ಎತ್ತುವ ಮೂಲಕ ರವಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಸತೀಶ್ ಅವರು ಸ್ನ್ಯಾಚ್ ಲಿಫ್ಟ್‌ನಲ್ಲಿ 149 ಕೆ.ಜಿ ಎತ್ತುವ ಮೂಲಕ ಈ ಹಿಂದಿನ ದಾಖಲೆಯನ್ನು ಮುರಿದರು. 2010ರಲ್ಲಿ ಚಿನ್ನದ ಪದಕ ಪಡೆದಿದ್ದ ಯುಕೊ ಪೀಟರ್ 148 ಕೆ.ಜಿ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದರು.
ಈ ಪ್ರದರ್ಶನದ ಮೂಲಕ ಭಾರತೀಯ ವೇಟ್‌ಲಿಫ್ಟರ್‌ಗಳು 2010ರ ಕ್ರೀಡಾಕೂಟಕ್ಕಿಂತ ಉತ್ತಮ ಸಾಧನೆ ಮಾಡಿದ್ದಾರೆ. ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತ ವೇಟ್‌ಲಿಫ್ಟರ್‌ಗಳು ಇದುವರೆಗೂ 3 ಚಿನ್ನ 2 ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆದರೆ, ಕಳೆದ ಬಾರಿ 2 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆದಿದ್ದರು.
ಭಾರತದ ಸತೀಶ್ ಆರಂಭದಿಂದಲೂ ಉತ್ತಮ ತಂತ್ರಗಾರಿಕೆ ರೂಪಿಸಿದರು. ಆರಂಭದಿಂದಲೇ 142 ಕೆ.ಜಿಯನ್ನು ಯಶಸ್ವಿಯಾಗಿ ಎತ್ತುವ ಮೂಲಕ ಮುನ್ನಡೆ ಸಾಧಿಸಿದರು. ಇನ್ನು ರವಿ ಮೊದಲ ಪ್ರಯತ್ನದಲ್ಲಿ ವಿಫಲರಾದರೂ, ಎರಡನೇ ಪ್ರಯತ್ನದಲ್ಲಿ ಸಫಲರಾದರು.
ಭಾರತದ ಈ ಇಬ್ಬರು ಲಿಫ್ಟರ್‌ಗಳು ಕ್ಲೀನ್ ಹಾಗೂ ಜರ್ಕ್ ವಿಭಾಗದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ರವಿ 175 ಕೆ.ಜಿಯನ್ನು ಎತ್ತುವ ಮೂಲಕ ಮುನ್ನಡೆ ಸಾಧಿಸಿದರಾದರೂ, ನಂತರ ಸತೀಶ್ 178 ಕೆ.ಜಿಯನ್ನು ಅನಾಯಾಸವಾಗಿ ಎತ್ತಿ ಮುನ್ನಡೆ ಪಡೆದುಕೊಂಡರು.
ಇನ್ನು ಇಂಗ್ಲೆಂಡ್‌ನ ಜ್ಯಾಕ್ ಒಲಿವರ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.