ಬ್ಯಾಡ್ಮಿಂಟನ್ನಲ್ಲಿ ನಿರಾಸೆ
ಗ್ಲಾಸ್ಗೋ: ಭಾರತಕ್ಕೆ ಚಿನ್ನದ ಪದಕ ತಂದುಕೊಡಬಲ್ಲ ನಿರೀಕ್ಷೆ ಹುಟ್ಟಿಸಿದ್ದ ಭಾರತದ ಮಿಶ್ರ ಬ್ಯಾಡ್ಮಿಂಟನ್ ತಂಡ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ 2-3 ಅಂತರದ ಸೋಲನುಭವಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿದೆ. ಗುರುಸಾಯಿದತ್ ಹಾಗೂ ಅಶ್ವಿನಿ ಪೊನ್ನಪ್ಪ 19-21, 19-21ರ ಅಂತರದಲ್ಲಿ ನಿಯೊ ವನ್ನೆಸ್ಸಾ ಹಾಗೂ ಡ್ಯಾನಿ ವಿರುದ್ಧ ನಿರಾಸೆ ಅನುಭವಿಸುವ ಮೂಲಕ ಭಾರತ ಕೆಟ್ಟ ಆರಂಭ ಪಡೆಯಿತು. ನಂತರ ಪಿ.ಕಶ್ಯಪ್ ಸಿಂಗಲ್ಸ್ ಪಂದ್ಯದಲ್ಲಿ ಚಾವ್ ಹಾಂಗ್ ವಿರುದ್ಧ 21-15, 22-10 ಅಂತರದ ಗೆಲವು ದಾಖಲಿಸಿ ತಂಡದ ಅಂತರವನ್ನು ಸಮಗೊಳಿಸಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತ ಸೋಲನುಭವಿಸಿತು. ನಂತರ ಮಹಿಳೆಯರ ಸಿಂಗಲ್ಸ್ನಲ್ಲಿ ಪಿ.ವಿ ಸಿಂಧು, ಕ್ಷೈಯು ಲಿಯಾಂಗ್ ವಿರುದ್ಧ 24-22, 21-13 ಅಂತರದ ಗೆಲವು ದಾಖಲಿಸಿ ಸಮಬಲ ಸಾಧಿಸಲು ನೆರವಾದರು. ಅಂತಿಮ ಪಂದ್ಯದಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿಯು, 21-17, 29-27ಅಂತರದಲ್ಲಿ ನಿರಾಸೆ ಅನುಭವಿಸಿದ್ದು ತಂಡ ಕಂಚಿನ ಪದಕ ವಂಚಿತವಾಗುವಂತೆ ಮಾಡಿತು.
ಇನ್ನು ಭಾನುವಾರ ನಡೆದ ಮಿಶ್ರ ತಂಡ ವಿಭಾಗದ ಉಪಾಂತ್ಯದ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ 0-3 ಅಂತರದಲ್ಲಿ ಮುಖಭಂಗ ಅನುಭವಿಸಿತ್ತು. ಆರಂಭಿಕ ಗೇಮ್ನಲ್ಲಿ ಜತೆಯಾಗಿ ಕಣಕ್ಕಿಳಿದ ಜ್ವಾಲಾ ಗುಟ್ಟಾ ಹಾಗೂ ಅಕ್ಷಯ್ ದೇವಾಲ್ಕರ್ 16-21,21-16, 11-21 ಅಂತರದಲ್ಲಿ ಎದುರಾಳಿ ಜೋಡಿಗೆ ಮಣಿಯಿತು. ನಂತರ ಸಿಂಗಲ್ಸ್ನಲ್ಲಿ ಪಿ.ಕಶ್ಯಪ್ ಎದುರಾಳಿ ರಾಜೀವ್ ಔಸೆಫ್ ವಿರುದ್ಧ 16-21, 19-21 ಅಂತರದಲ್ಲಿ ಸೋಲನುಭವಿಸಿದರು. ಇನ್ನು ಮೂರನೇ ಗೇಮ್ನಲ್ಲಿ ಅಕ್ಷಯ್ ಹಾಗೂ ಪ್ರಣವ್ ಪುರುಷರ ಡಬಲ್ಸ್ನಲ್ಲಿ 21-12 13-21, 16-21 ಕ್ರಿಸ್ ಹಾಗೂ ಆ್ಯಂಡ್ರೂ ಎಲ್ಲಿಸ್ ವಿರುದ್ಧ ಮಣಿದರು.