ಭಾರತಕ್ಕೆ ಎಚ್ಚರಿಕೆಯ ಬೆಲ್
ಸೌಥಂಪ್ಟನ್: ಇಯಾನ್ ಬೆಲ್ (167) ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸುವುದರೊಂದಿಗೆ, ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್ಗೆ 569 ರನ್ಗಳ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ಡಿಕ್ಲೇರ್ ಘೋಷಿಸಿತು.
ಇಂಗ್ಲೆಂಡ್ಗೆ ಆಸರೆಯಾಗಿ ನಿಂತ ಬೆಲ್ ಭಾರತದ ಬೌಲರ್ಗಳನ್ನು ದಂಡಿಸಿದರು. ಇನ್ನು ಬೆಲ್ ಅವರೊಂದಿಗೆ ತಕ್ಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಮತ್ತು ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಜೋಸ್ ಬಟ್ಲರ್ 83 ಎಸೆತಗಳಲ್ಲಿ 85 ರನ್ ಗಳಿಸುವ ಮೂಲಕ, ಇಂಗ್ಲೆಂಡ್ ಡಿಕ್ಲೇರ್ ಪಡೆಯುವ ಮುನ್ನ ವೇಗವಾಗಿ ರನ್ ಗಳಿಸುವಂತೆ ನೋಡಿಕೊಂಡರು.
ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ 2ನೇ ದಿನಾಂತ್ಯಕ್ಕೆ 14 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 25 ರನ್ ಗಳಿಸಿತು. ಮುರಳಿ ವಿಜಯ್ (ಬ್ಯಾಟಿಂಗ್ 11) ಮತ್ತು ಚೇತೇಶ್ವರ ಪೂಜಾರ (ಬ್ಯಾಟಿಂಗ್ 4) ಮಂಗಳವಾರಕ್ಕೆ ವಿಕೆಟ್ ಕಾಯ್ದಿರಿಸಿಕೊಂಡಿದ್ದಾರೆ. ಈಗ ಭಾರತದ ಎದುರಿಗಿರುವ ಮೊದಲ ಗುರಿ ಎಂದರೆ, 370 ರನ್ ಗಳಿಸುವ ಮೂಲಕ ಫಾಲೋ ಆನ್ನಿಂದ ತಪ್ಪಿಸಿಕೊಳ್ಳುವುದು. ಆರಂಭಿಕ ಆಟಗಾರ ಶಿಖರ್ ಧವನ್ (6) ಅವರು ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಅಲಸ್ಟೇ ಕುಕ್ಗೆ ಕ್ಯಾಚ್ ನೀಡುವ ಮೂಲಕ ಭಾರತ ಆರಂಭಿಕ ಆಘಾತ ಅನುಭವಿಸಿತು.
ಇನ್ನು ಇಂಗ್ಲೆಂಡ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಬೆಲ್ ಅವರು, ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 21ನೇ ಶತಕ ಪೂರೈಸಿದರು. ಅಲ್ಲದೆ, ತಮ್ಮ ಟೆಸ್ಟ್ನಲ್ಲಿ 7000 ರನ್ಗಳ ಗಡಿ ದಾಟಿದರು. ರವೀಂದ್ರ ಜಡೇಜಾ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಬೆಲ್ ಈ ಸಾಧನೆ ಮಾಡಿದರು. ಇಂಗ್ಲೆಂಡ್ ಪರ ಶತಕ ಸಿಡಿಸಿದ ಇನ್ನೊಬ್ಬ ಆಟಗಾರ ಗ್ಯಾರಿ ಬ್ಯಾಲೆನ್ಸ್ (156) ಅವರೊಂದಿಗೆ ಜತೆಯಾಟದಲ್ಲಿ ಇಯಾನ್ ಬೆಲ್ 3ನೇ ವಿಕೆಟ್ಗೆ 142 ರನ್ ಕಲೆ ಹಾಕಿದರು. ಆಗ ರೋಹಿತ್ ಶರ್ಮಾ ಬೌಲಿಂಗ್ನಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಕ್ಯಾಚ್ ನೀಡಿದ ಬ್ಯಾಲೆನ್ಸ್ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
6 ಗಂಟೆ 15 ನಿಮಿಷಗಳ ಕಾಲ ಕ್ರೀಸ್ನಲ್ಲಿ ನಿಂತು 288 ಎಸೆತಗಳನ್ನು ಎದುರಿಸಿದ ಬ್ಯಾಲೆನ್ಸ್ 24 ಬೌಂಡರಿಗಳನ್ನು ದಾಖಲಿಸಿದ್ದರು. ಇನ್ನು 256 ಎಸೆತಗಳನ್ನು ಎದುರಿಸಿದ ಬೆಲ್ ಮೊತ್ತದಲ್ಲಿ 3 ಸಿಕ್ಸರ್ ಮತ್ತು 19 ಬೌಂಡರಿಗಳು ಸೇರಿದ್ದವು.
ಆದರೆ, ಜಾಯ್ ರೂಟ್ ಮತ್ತು ಮೋಯಿನ್ ಅಲಿ ಅವರು ಭುವನೇಶ್ವರ ಕುಮಾರ್ ಬೌಲಿಂಗ್ನಲ್ಲಿ ಸುಲಭವಾಗಿ ವಿಕೆಟ್ ಒಪ್ಪಿಸಿದರು. ಆದರೆ, 37 ಓವರ್ಗಳಲ್ಲಿ 101 ರನ್ ನೀಡಿ 3 ವಿಕೆಟ್ ಪಡೆದ ಭುವನೇಶ್ವರ ಪಂದ್ಯದ ಮಟ್ಟಿಗೆ ದುಬಾರಿ ಬೌಲರ್ ಎನಿಸಿದರು. ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಮೊಹ್ಮದ್ ಶಮಿ ಮತ್ತು ರೋಹಿತ್ ಶರ್ಮಾ ಅವರು ತಲಾ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನಿಂಗ್ಸ್ 569/7 (ಡಿಕ್ಲೇರ್) ಗ್ಯಾರಿ ಬ್ಯಾಲೆನ್ಸ್ ಸಿ ಧೋನಿ ಬಿ ರೋಹಿತ್ 156, ಇಯಾನ್ ಬೆಲ್ ಸಿ ಪಂಕಜ್ ಬಿ ಭುವನೇಶ್ವರ 167, ಜೋ ರೂಟ್ ಸಿ ಧೋನಿ ಬಿ ಭುವನೇಶ್ವರ್ 3, ಮೋಯಿನ್ ಅಲಿ ಸಿ ರಹಾನೆ ಬಿ ಭುವನೇಶ್ವರ್ 12, ಜೋಸ್ ಬಟ್ಲರ್ ಬಿ ಜಡೇಜಾ 85, ಕ್ರಿಸ್ ಓಕ್ಸ್ ಅಜೇಯ 7, ಇತರೆ: (ಬೈ 5, ಲೆಗ್ ಬೈ11, ವೈಡ್ 2) ಒಟ್ಟು 18
ವಿಕೆಟ್ ಪತನ: 1-55, 2-213, 3-355, 4-378, 5-420, 6-526, 7-569
ಬೌಲಿಂಗ್ ವಿವರ: ಭುವನೇಶ್ವರ್ ಕುಮಾರ್ 37-1-101-3,
ಮೊಹಮದ್ ಶಮಿ 33-4-123-1, ಪಂಕಜ್ ಸಿಂಗ್ 37-8-146-0, ರೋಹಿತ್ ಶರ್ಮಾ 9-0-26-1, ರವೀಂದ್ರ ಜಡೇಜಾ 45.4-10-153-2, ಶಿಖರ್ ಧವನ್ 2-0-4-0.
ಭಾರತ ಮೊದಲ ಇನಿಂಗ್ಸ್ 25/1 ಶಿಖರ್ ಧವನ್ ಸಿ ಕುಕ್ ಬಿ ಆ್ಯಂಡರ್ಸನ್ 6, ಮುರಳಿ ವಿಜಯ್ ಬ್ಯಾಟಿಂಗ್ 11, ಪೂಜಾರ ಬ್ಯಾಟಿಂಗ್ 4. ಇತರೆ (ಬೈಸ್ 4) 4.
ಬೌಲಿಂಗ್: ಆ್ಯಂಡರ್ಸನ್ 7-3-141, ಬ್ರಾಡ್ 4-2-4-0,ಜೋರ್ಡಾನ್ 2-1-3 -0, ವೋಕ್ಸ್ 1-1-0-0.