ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸರಣಿ ಗೆದ್ದ ಹರಿಣಗಳು

ತಂಡ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಸಮಯದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ರಕ್ಷಣಾತ್ಮಕ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ..

Srinivasa Murthy VN
Updated On : 29 Jul 2014, 12:41 pm

ಕೊಲಂಬೊ: ತಂಡ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಸಮಯದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ರಕ್ಷಣಾತ್ಮಕ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಸೋಮವಾರ ಮುಕ್ತಾಯಗೊಂಡ ಎರಡನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ಕಳೆದುಕೊಂಡು 159 ರನ್ ದಾಖಲಿಸಿ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು. ಇನ್ನು ಮೊದಲ ಟೆಸ್ಟ್‌ನಲ್ಲಿ ಗೆಲವು ದಾಖಲಿಸಿದ್ದ ಪ್ರವಾಸಿಗರು, ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಗೆಲವು ಸಾಧಿಸಿದರು.
ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾ ನೀಡಿದ 369 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ದಿನದಾಟ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 38 ರನ್ ದಾಖಲಿಸಿತ್ತು. ನಂತರ ಅಂತಿಮ ದಿನದಾಟದಲ್ಲಿ ರನ್ ಗಳಿಸುವತ್ತ ಗಮನ ಹರಿಸದೇ, ಕೇವಲ ವಿಕೆಟ್ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಿದ ಹರಿಣಗಳು, ದಿನದ ಆಟದಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 121 ರನ್ ಮಾತ್ರ ಗಳಿಸಿತು. ಹಾಗಾಗಿ ಪಂದ್ಯದಲ್ಲಿ ಅಪಾಯದಿಂದ ಪಾರಾಯಿತು.
ದಿನದಾಟ ಮುಂದುವರಿಸಿದ ಡೀನ್ ಎಲ್ಗರ್ ಹಾಗೂ ಖಿಂಟಾನ್ ಡಿ ಕಾಕ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಎಲ್ಗರ್ (13) ದಿನದಾಟದಲ್ಲಿ ರನ್ ಗಳಿಸುವ ಮುನ್ನವೇ ವಿಕೆಟ್ ನೀಡಿದರು. ನಂತರ ಖಿಂಟಾನ್ 37 ರನ್ ದಾಖಲಿಸಿದರು. ಇನ್ನು ಹಶೀಮ್ ಆಮ್ಲಾ ಬರೋಬ್ಬರಿ 159 ಎಸೆತಗಳನ್ನು ಎದುರಿಸಿ ಕೇವಲ 25 ರನ್ ದಾಖಲಿಸಿ ಲಂಕಾ ಬೌಲರ್‌ಗಳನ್ನು ಕಾಡಿದರು.
ಡಿವಿಲಿಯರ್ಸ್ 12, ಡುಪ್ಲೆಸಿಸ್ 10, ಡುಮಿನಿ 2 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದು, ತಂಡಕ್ಕೆ ತೀವ್ರ ಹಿನ್ನಡೆಯುಂಟುಮಾಡಿತು. ದಿನದಾಟದಲ್ಲಿ ಇನ್ನು 17 ಓವರ್‌ಗಳು ಬಾಕಿ ಇರುವಾಗ ಹರಿಣಗಳು 7 ವಿಕೆಟ್ ಕಳೆದುಕೊಂಡಿತು. ಆಗ ಲಂಕನ್ನರು ಗೆಲವು ದಾಖಲಿಸಲು ಕೇವಲ 3 ವಿಕೆಟ್ ಅವಶ್ಯಕತೆ ಇತ್ತು. ಈ ವೇಳೆ ಸ್ಟೇಯ್ನ್ 6 ರನ್‌ಗಳಿಸಿ ಔಟಾದರು. ಅಂತಿಮ ಹಂತದಲ್ಲಿ ಬರೋಬ್ಬರಿ 98 ಎಸೆತಗಳನ್ನು ಎದುರಿಸಿದ ವರ್ನಾನ್ ಫಿಲ್ಯಾಂಡರ್ ಅಜೇಯ 27 ರನ್ ದಾಖಲಿಸಿ ತಂಡಕ್ಕೆ ಆಸರೆಯಾಗಿ ನಿಂತರು. ಮತ್ತೊಂದೆಡೆ ಇಮ್ರಾನ್ ತಾಹಿರ್ ಸಹ ಎಚ್ಚರಿಕೆಯ ಆಟವಾಡಿ 27 ಎಸೆತಗಳಲ್ಲಿ ಅಜೇಯ 4 ರನ್ ಗಳಿಸಿ ಲಂಕಾ ಗೆಲುವಿನ ಕನಸಿಗೆ ತಣ್ಣೀರೆರೆಚಿದರು.
ಪಂದ್ಯದಲ್ಲಿ ಲಂಕಾ ಪರ ಅತ್ಯಮೂಲ್ಯ ಶತಕ ಬಾರಿಸಿದ ಮಹೆಲ ಜಯವರ್ದನೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್ 421
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 282

ಶ್ರೀಲಂಕಾ ಎರಡನೇ ಇನಿಂಗ್ಸ್ 229ಕ್ಕೆ8 (ಡಿ.)ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ 159ಕ್ಕೆ8
(ಖಿಂಟಾನ್ ಡಿ ಕಾಕ್ 37, ವರ್ನಾನ್ ಫಿಲ್ಯಾಂಡರ್ ಅಜೇಯ 27, ಹಶೀಂ ಆಮ್ಲಾ 25, ರಂಗನ ಹೆರಾಥ್ 40ಕ್ಕೆ5, ದಿಲ್ರುವಾನ್ ಪೆರೇರಾ 60ಕ್ಕೆ3)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement