ಕೆಎಸ್ಸಿಎ ಕಾಲ್ಟ್ಸ್ಗೆ ಜಯ
ಬೆಂಗಳೂರು: ಆಲ್ರೌಂಡ್ ಪ್ರದರ್ಶನ ತೋರಿದ ಕೆಎಸ್ಸಿಎ ಕಾಲ್ಟ್ಸ್ ತಂಡ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳವಾರ ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ 9 ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಮೊದಲ ಇನಿಂಗ್ಸ್ನಲ್ಲಿ ಆಂಧ್ರ ತಂಡವನ್ನು 356 ರನ್ಗಳಿಗೆ ಆಲೌಟ್ ಮಾಡಿದ್ದ ಕೆಎಸ್ಸಿಎ ಕಾಲ್ಟ್ಸ್ ತಂಡ 515 ನರ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ನಂತರ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 177 ರನ್ಗಳಿಗೆ ಆಂಧ್ರವನ್ನು ಆಲೌಟ್ ಮಾಡಿ, ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 1.4 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 22 ರನ್ ಗಳಿಸುವ ಮೂಲಕ ಸುಲಭವಾಗಿ ಜಯ ಸಾಧಿಸಿತು.
ಕೆಎಸ್ಸಿಎ ಕಾಲ್ಟ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಎಂ.ಬಿ ದರ್ಶನ್ ಅವರು 45 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇನ್ನು ಕೆಎಸ್ಸಿಎ ಇಲೆವೆನ್ ತಂಡ ಒಡಿಶಾ ಕ್ರಿಕೆಟ್ ಸಂಸ್ಥೆಯ ವಿರುದ್ಧ 2 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತು. ಮೊದಲ ಇನಿಂಗ್ಸ್ನಲ್ಲಿ ಒಡಿಶಾವನ್ನ್ನು 214 ರನ್ಗಳಿಗೆ ಕಟ್ಟಿ ಹಾಕಿದ್ದ ಕೆಎಸ್ಸಿಎ ಇಲೆವೆನ್ ತಂಡ ನಂತರ 223 ರನ್ ಕಲೆ ಹಾಕಿ ಮುನ್ನಡೆ ಸಾಧಿಸಿತ್ತು. ನಂತರ ದ್ವಿತೀಯ ಇನಿಂಗ್ಸ್ನಲ್ಲಿ ಒಡಿಶಾವನ್ನ್ನು 262 ರನ್ಗಳಿಗೆ ನಿಯಂತ್ರಿಸಿ ನಂತರ 247 ರನ್ ಗಳಿಸಿ ಜಯ ಕಂಡಿತು.
ಮತ್ತೊಂದು ಪಂದ್ಯದಲ್ಲಿ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡ ಗೋವಾ ಕ್ರಿಕೆಟ್ ಸಂಸ್ಥೆ ವಿರುದ್ಧ ಡ್ರಾ ಸಾಧಿಸಿತು. ಬರೋಡಾ ಮತ್ತು ಡಿ.ವೈ ಪಾಟೀಲ್ ಅಕಾಡೆಮಿ ನಡುವೆ ನಡೆದ ಪಂದ್ಯ ಸಹ ಡ್ರಾದಲ್ಲಿ ಅಂತ್ಯಗೊಂಡಿತು.
ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಕೇರಳ ವಿರುದ್ಧ 196 ರನ್ಗಳಿಂದ ಜಯ ಕಂಡುಕೊಂಡಿತು. ಮತ್ತೊಂದು ಪಂದ್ಯದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತಂಡ ಆಸಾಂ ವಿರುದ್ಧ 195 ರನ್ಗಳಿಂದ ಜಯ ಕಂಡುಕೊಂಡಿತು.