ಫೈನಲ್ಗೆ ಪ್ರವೇಶಿಸಲು ಎಡವಿದ ಪೂವಮ್ಮ
ಗ್ಲಾಸ್ಗೋ: ಅಥ್ಲೆಟಿಕ್ಸ್ನಲ್ಲಿ ಭರವಸೆ ಮೂಡಿಸಿದ್ದ ಕರ್ನಾಟಕದ ಓಟಗಾರ್ತಿ ಪೂವಮ್ಮ ಮಚೆಟ್ಟಿರಾ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಿರಾಸೆ ಅನುಭವಿಸಿದ್ದಾರೆ.
ಸೋಮವಾರ ತಡರಾತ್ರಿ ನಡೆದ ಮಹಿಳೆಯರ 400 ಮೀ. ಓಟದ ಸೆಮಿಫೈನಲ್ ಸುತ್ತಿನಲ್ಲಿ ಐದನೇ ಸ್ಥಾನ ಪಡೆದ ಪೂವಮ್ಮ, ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ವಿಫಲರಾದರು. 8ನೇ ಲೇನ್ನಲ್ಲಿ ರೇಸ್ ಆರಂಭಿಸಿದ ಪೂವಮ್ಮ 52.88 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಪ್ರಸಕ್ತ ಸಾಲಿನ ಅವರ ಅತ್ಯುತ್ತಮ 51.73 ಸೆ. ಗಿಂತಲೂ ಕಡಿಮೆ ವೇಗದಲ್ಲಿ ಸಾಗಿದರು. ಒಂದು ವೇಳೆ ಅವರು ತಮ್ಮ ಋತುವಿನ ಅತ್ಯುತ್ತಮ ಸಾಧನೆಯನ್ನು ಪುನಾರಾವರ್ತಿಸಿದ್ದರೆ, ಪದಕದ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗುತ್ತಿತ್ತು.
ಶಾರದ ನಿರಾಸೆ: ಭಾರತದ ಮತ್ತೋರ್ವ ಓಟಗಾರ್ತಿ ನಾರಾಯಣ ಶಾರದ ಮಹಿಳೆಯರ 100 ಮೀ. ಪದಕದ ಸುತ್ತಿಗೆ ಪ್ರವೇಶಿಸಲು ವಿಫಲರಾಗಿದ್ದಾರೆ. ಚೆನ್ನೈ ಮೂಲದ 27 ವರ್ಷದ ಓಟಗಾರ್ತಿ ಶಾರದ ಉಪಾಂತ್ಯದ ಸುತ್ತಿನಲ್ಲಿ ಆರನೇ ಸ್ಥಾನ ಪಡೆಯುವ ಮೂಲಕ ನಿರಾಸೆ ಅನುಭವಿಸಿದರು. 11.71 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ನಿರಾಸೆ ಅನುಭವಿಸಿದರು. ಇನ್ನು ಜಮೈಕಾದ ಶಿಲ್ಲೊನಿ ಕ್ಯಾಲ್ವರ್ಟ್ 11.08 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಅಗ್ರಸ್ಥಾನ ಪಡೆದರು. ಇನ್ನು ಫೈನಲ್ ಸುತ್ತಿನಲ್ಲಿ ನೈಜೀರಿಯಾದ ಬ್ಲೆಸಿಂಗ್ ಒಕಾಗ್ಬರೆ 10.85 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿ ಚಿನ್ನದ ಪದಕ ಪಡೆದರು. ಜಮೈಕಾದ ವರೊನಿಕಾ ಕ್ಯಾಂಬೆಲ್ 11.03 ಸೆಕೆಂಡ್ಗಳಲ್ಲಿ ಹಾಗೂ ಕೆರೊನ್ ಸ್ಟಿವರ್ಟ್ 11.07 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.
ಪ್ರಕಾಶ್ 6ನೇ ಸ್ಥಾನ: ಭಾರತದ ಶಾಟ್ಪುಟ್ಪಟು ಓಂ ಪ್ರಕಾಶ್ ಅಂತಿಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸೋಮವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 18.98 ಮೀ. ದೂರ ಎಸೆಯುವ ಮೂಲಕ ಓಂ ಪ್ರಕಾಶ್ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು. ಪ್ರಕಾಶ್ ಅಂತಿಮ ಸುತ್ತಿನಲ್ಲಿ ಕೇವಲ 18.73 ಮೀ. ದೂರ ಎಸೆಯುವ ಮೂಲಕ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಜಮೈಕಾದ ಒಡೈನೆ ರಿಚರ್ಡ್ ಕೂಟ ದಾಖಲೆ ನಿರ್ಮಿಸಿ ಚಿನ್ನದ ಪದಕ ಪಡೆದಿದ್ದಾರೆ. 21.16 ಮೀ. ದೂರ ಎಸೆಯುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು.