ವನಿತೆಯರ ಗೋಲು ಮಳೆಗೆ ಕೊಚ್ಚಿ ಹೋದ ಟೊಬೇಗೂ
ಗ್ಲಾಸ್ಗೋ: ಭಾರತದ ವನಿತೆಯರ ಗೋಲು ಮಳೆಯಲ್ಲಿ ಟ್ರಿನಿಡಾಡ್ ಆ್ಯಂಡ್ ಟೊಬೇಗೊ ಕೊಚ್ಚಿ ಹೋಗಿದೆ. ಮಂಗಳವಾರ ನಡೆದ ಕಾಮನ್ವೆಲ್ತ್ ಗೇಮ್ಸ್ನ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು 14-0 ಗೋಲುಗಳಿಂದ ಟ್ರಿನಿಡಾಡ್ ಆ್ಯಂಡ್ ಟೊಬೇಗೊ ಪಡೆಯನ್ನು ಸುಲಭವಾಗಿ ಸದೆಬಡಿದರು.
ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಗೋಲುಗಳಿಂದ ಆಘಾತ ಅನುಭವಿಸಿದ್ದ ಭಾರತೀಯರು ಈ ಪಂದ್ಯದಲ್ಲಿ ಮಾತ್ರ ರೋಚಕ ಆಟ ಪ್ರದರ್ಶಿಸಿ ಗೋಲಿನ ಮಳೆಯನ್ನೇ ಸುರಿಸಿದರು. ಈ ಗೆಲವಿನೊಂದಿಗೆ ಭಾರತ, ಐದು ತಂಡಗಳ ಎ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯಿತು. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು ಎದುರಾಗಲಿದೆ.
ವಿಜೇತ ಭಾರತ ತಂಡದ ಪರ ವಂದನಾ ಕತಾರಿಯಾ 4ನೇ ನಿಮಿಷ, ದೀಪಿಕಾ 11ನೇ, 27ನೇ, 64ನೇ ನಿಮಿಷ, ರಾಣಿ 12ನೇ, 19ನೇ, 25ನೇ ನಿಮಿಷ, ಜಸ್ಪ್ರೀತ್ ಕೌರ್ 18ನೇ. 41ನೇ, 48ನೇ ನಿಮಿಷ, ನಾಯಕಿ ರಿತು ರಾಣಿ 22ನೇ ನಿಮಿಷ, ಅನುರಾಧಾ ಥೋಕ್ಚಾಮ್ 31ನೇ ನಿಮಿಷ, ಅನುಪಾ ಬಾರ್ಲಾ 53ನೇ ನಿಮಿಷ ಮತ್ತು ರಿತುಶಾ ಆರ್ಯ 68ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.