ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆ.28ರಿಂದ ಒಡೆಯರ್ ಕೆಪಿಎಲ್ ಮತ್ತೆ ಆರಂಭ

Srinivasa Murthy VN
Updated On : 30 Jul 2014, 11:43 am

ಬೆಂಗಳೂರು: ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ರ ಕನಸಾದ  ಕೆಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯ ಲಾಂಛನವನ್ನು ಬುಧವಾರ ಅನಾವರಣಗೊಳಿಸಲಾಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಂಛನವನ್ನು ಬಿಡುಗಡೆ ಮಾಡಿದ್ದು, ಟೂರ್ನಿಗೆ 'ಒಡೆಯರ್ ಕೆಪಿಎಲ್‌' ಎಂದು ಹೆಸರಿಡುವ ಮೂಲಕ ಪಂದ್ಯಾವಳಿಯನ್ನು ಕೆಎಸ್‌ಸಿಎ ಮಾಜಿ ಅಧ್ಯಕ್ಷರ ನೆನಪಿನಲ್ಲಿ ಆಯೋಜಿಸುವ ಘೋಷಣೆ ಮಾಡಲಾಯಿತು.
ಟೂರ್ನಿಯು ಬರುವ ಆಗಸ್ಟ್ 28ರಿಂದ ಸೆಪ್ಟೆಂಬರ್ 12ರವರೆಗೆ ನಡೆಯಲಿದ್ದು, ಪ್ರತಿ ದಿನ ಎರಡು ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಆ.28ರಿಂದ ಸೆ.3ರವರೆಗೆ ಮೈಸೂರಿನಲ್ಲಿ, ಸೆ.5ರಿಂದ 7ರವರೆಗೆ ಬೆಂಗಳೂರಿನಲ್ಲಿ, ಸೆ.9ರಿಂದ 12ರವರೆಗೆ ಹುಬ್ಬಳ್ಳಿಯಲ್ಲಿ ಪಂದ್ಯಗಳನ್ನು ನಡೆಸಲಾಗುವುದು ಎಂದು ಕೆಎಸ್‌ಸಿಎ ಅಧ್ಯಕ್ಷ ಅಶೋಕ್ ಆನಂದ್ ಸುದ್ದಿಗಾರರಿಗೆ ತಿಳಿಸಿದರು.
7 ತಂಡಗಳು: ಪ್ರಸಕ್ತ ಆವೃತ್ತಿಯಲ್ಲಿ ನಟ ಸುದೀಪ್ ನೇತೃತ್ವದ ಸಿನಿಮಾ ತಾರೆಗಳ ರಾಕ್ ಸ್ಟಾರ್ಸ್ ತಂಡ ಸೇರಿದಂತೆ ಒಟ್ಟು 7 ತಂಡಗಳು ಭಾಗವಹಿಸುತ್ತಿವೆ. ಆರಂಭಿಕ ಎರಡು ಆವೃತ್ತಿಯಲ್ಲಿ ಭಾಗವಹಿಸಿದ್ದ ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ ಬುಲ್ಸ್ ತಂಡಗಳು ಈ ಆವೃತ್ತಿಯಲ್ಲೂ ಭಾಗವಹಿಸುತ್ತಿವೆ. ಉಳಿದಂತೆ ಬೆಂಗಳೂರು ಬ್ರಿಗೇಡಿಯರ್ಸ್, ಬೆಂಗಳೂರು ಪ್ರಾವಿಡೆಂಟ್, ಮಲ್ನಾಡ್ ಗ್ಲಾಡಿಯೇಟರ್ಸ್, ಮೈಸೂರು ಮಹಾರಾಜಾಸ್ ಮತ್ತು ದಾವಣಗೆರೆ ಡೈಮಂಡ್ಸ್ ತಂಡಗಳು ಭಾಗವಹಿಸುತ್ತಿಲ್ಲ. ಬದಲಾಗಿ ಟೀಂ ಮೈಸೂರು, ಹುಬ್ಬಳ್ಳಿ ಟೈಗರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ ಎಂದರು.
ಆ.7ರಂದು ಆಟಗಾರರ ಹರಾಜು: ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 7 ರಂದು ನಡೆಯಲಿದೆ. ಆಟಗಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಒಟ್ಟು 30 ಪ್ರಮುಖ ಆಟಗಾರರಿದ್ದು, ಪ್ರತಿ ತಂಡ ಗರಿಷ್ಠ ಐವರು ಆಟಗಾರರನ್ನು ಒಟ್ಟು 12 ಲಕ್ಷದ ಮೊತ್ತದೊಳಗೆಯೇ ಖರೀದಿ ಮಾಡಬೇಕು. ಆಟಗಾರರ ಮೂಲ ಬೆಲೆ 50 ಸಾವಿರ ರೂ. ಬಿ ಗುಂಪಿನಲ್ಲಿ ಕ್ಲಬ್ ಆಟಗಾರರಿದ್ದು,  ಒಟ್ಟು 8 ಲಕ್ಷದ ಮೊತ್ತದೊಳಗೆ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಪ್ರತಿ ಫ್ರಾಂಚೈಸಿ 20 ಲಕ್ಷ ಮೊತ್ತದಲ್ಲಿ ತಂಡದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ಆಟಗಾರರ ಮೂಲ ಬೆಲೆ 10 ಸಾವಿರ ಆಗಿರುತ್ತದೆ. ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ತಂಡ ರು. 10 ಲಕ್ಷ ಬಹುಮಾನ ಮೊತ್ತ ಪಡೆಯಲಿದೆ.

ನಾನು ಕ್ರಿಕೆಟರ್ ಆಗಬೇಕೆಂದು ಕನಸು ಕಂಡಿದ್ದೆ ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ರಾಜ್ಯದ ಪ್ರಮುಖ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ. ನಾವು ಹೆಚ್ಚಿನ ಸ್ಪರ್ಧೆ ನೀಡದಿದ್ದರೂ, ನಮ್ಮಿಂದಾಗುವ ಮಟ್ಟಿಗೆ ಉತ್ತಮ ಹೋರಾಟ ನಡೆಸಲಿದ್ದೇವೆ.
-ಸುದೀಪ್
ರಾಕ್ ಸ್ಟಾರ್ಸ್ ತಂಡದ ನಾಯಕ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement