ಮಾಲಿಗೆ ಕಂಚಿನ ಮಾಲೆ
ಭಾರತದ ಚಂದ್ರಕಾಂತ್ ಮಾಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಗ್ಲಾಸ್ಗೋ: ಭಾರತದ ಚಂದ್ರಕಾಂತ್ ಮಾಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮಂಗಳವಾರ ಮಧ್ಯರಾತ್ರಿ ನಡೆದ 94 ಕೆ.ಜಿ. ತೂಕದ ವಿಭಾಗದಲ್ಲಿ ಚಂದ್ರಕಾಂತ್ ಮಾಲಿ ಒಟ್ಟು 338 ಕೆ.ಜಿ. ಭಾರ ಎತ್ತುವುದರೊಂದಿಗೆ ಮೂರನೇ ಸ್ಥಾನದ ಗೌರವ ಪಡೆದರು. ಸ್ನ್ಯಾಚ್ನಲ್ಲಿ ಮೂರನೇ ಪ್ರಯತ್ನದಲ್ಲಿ 150 ಕೆ.ಜಿ. ಮತ್ತು ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ 188 ಕೆ.ಜಿ. ಭಾರ ಎತ್ತುವ ಮೂಲಕ ಕಂಚಿನ ಪದಕಕ್ಕೆ ಭಾಜನರಾದರು. ಪಪುವಾ ನ್ಯೂ ಗಿನಿಯಾದ ಸ್ಟೀವನ್ ಕುಕುನಾ ಕಾರಿ ಒಟ್ಟು 349 ಕೆ.ಜಿ. ಭಾರ ಎತ್ತಿದ ಸಾಧನೆಯೊಂದಿಗೆ ಸ್ವರ್ಣ ಪದಕ ಸಂಪಾದಿಸಿದರೆ, ಕೆಮರೂನ್ನಲ್ಲಿ ಜನಿಸಿ ಆಸ್ಟ್ರೇಲಿಯಾದ ಪೌರತ್ವ ಹೊಂದಿರುವ ಸಿಂಪ್ಲೈಸ್ ರಿಬೌಮ್ ಕೂಡ 349 ಕೆ.ಜಿ. ಭಾರ ಎತ್ತಿ ಕಾರಿ ಜೊತೆ ಚಿನ್ನದ ಪದಕಕ್ಕೆ ಸಮಗೌರವ ಹೊಂದಿದ್ದರು. ಆದರೆ, ಕಡಿಮೆ ತೂಕ ಹೊಂದಿದ್ದ ಆಧಾರದ ಮೇಲೆ ಪಪುವಾ ನ್ಯೂ ಗಿನಿಯಾದ ವೇಟ್ ಲಿಫ್ಟರ್ಗೆ ಚಿನ್ನದ ಭಾಗ್ಯ ಸಿಕ್ಕಿತು.