ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚುನಾವಣೆಗಾಗಿ ಕ್ರೀಡಾ ಹಣಕ್ಕೆ ಕತ್ತರಿ ಹಾಕಿದ್ದ ಯುಪಿಎ ಸರ್ಕಾರ

Srinivasa Murthy VN
Updated On : 2 Jun 2014, 1:08 am

ಭಾರತದಲ್ಲಿ ಕ್ರಿಕೆಟ್ ಹಾಕಿ, ಟೆನಿಸ್ ಹಾಗೂ ಫುಟ್ಬಾಲ್‌ನಂತಹ ಕ್ರೀಡೆಗಳು ಕಾರ್ಪೊರೇಟ್ ಪ್ರಯೋಜಕತ್ವದಿಂದ ಆರ್ಥಿಕವಾಗಿ ಸುಸ್ಥಿತಿಯಲ್ಲಿರಬಹುದು, ಆದರೆ ರೋಯಿಂಗ್, ಸ್ವಿಮ್ಮಿಂಗ್, ಜಿಮ್ನಾಸ್ಟಿಕ್, ಬಾಸ್ಕೆಟ್‌ಬಾಲ್, ಬೌಲಿಂಗ್, ಸೈಕ್ಲಿಂಗ್, ನೆಟ್‌ಬಾಲ್, ಖೊ ಖೊ, ಕಬ್ಬಡಿ ಸೇರಿದಂತೆ ಇನ್ನು ಹಲವು ಕ್ರೀಡೆಗಳು ಸರ್ಕಾರದ ಹಣಕಾಸಿನ ಮೇಲೆ ಸಂಪೂರ್ಣ ಆಧಾರವಾಗಿವೆ.
ಇಂತಹ ಸಂದರ್ಭದಲ್ಲಿ ಕಳೆದ ಯುಪಿಎ ಸರ್ಕಾರ ಚುನಾವಣೆಯ ವೆಚ್ಚವನ್ನು ಭರಿಸುವ ಸಲುವಾಗಿ ಕ್ರೀಡಾ ಸಂಸ್ಥೆಗಳಿಗೆ ನೀಡಬೇಕಾದ ಹಣಕಾಸಿನ ಪ್ರಮಾಣಕ್ಕೆ ಕತ್ತರಿ ಹಾಕಿದ್ದು, ಈ ಕ್ರೀಡಾ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಅಲ್ಲದೆ ಕ್ರೀಡಾಕೂಟಗಳನ್ನು ಆಯೋಜಿಸಲು, ಅದರಲ್ಲಿ ಭಾಗವಹಿಸುವ ಆಟಗಾರರಿಂದಲೇ ಹಣವನ್ನು ಸಂಗ್ರಹಿಸುವ ಪರಿಸ್ಥಿತಿ ಎದುರಾಗಿರುವುದು ಭಾರತೀಯ ಕ್ರೀಡೆಯ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿ.
ಪರಿಸ್ಥಿತಿ ಈ ರೀತಿ ಇರುವಾಗ, ನಾವು ದೇಶದ ಕ್ರೀಡಾ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂದು ಅಪೇಕ್ಷಿಸುವುದು ನಮ್ಮ ದಡ್ಡತನವಲ್ಲವೇ?
ಈ ಹಿಂದೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಹಿರಿಯರ ಕ್ರೀಡಾಕೂಟವನ್ನು ಆಯೋಜಿಸಲು # 2 ಲಕ್ಷ, ಕಿರಿಯರ ಕ್ರೀಡಾಕೂಟವನ್ನು ಆಯೋಜಿಸಲು # 4 ಹಾಗೂ ಸಬ್ ಜೂನಿಯರ್ ಕ್ರೀಡಾಕೂಟಕ್ಕೆ 6 ಲಕ್ಷ ನೀಡಲಾಗುತ್ತಿತ್ತು.
ಆದರೆ ಯುಪಿಎ ಸರ್ಕಾರ ಕ್ರೀಡಾ ಸಂಸ್ಥೆಯ ಹಣಕಾಸಿಗೆ ಕತ್ತರಿ ಹಾಕಿದ್ದು, ಪ್ರತಿ ಕ್ರೀಡಾ ಫೆಡರೇಷನ್‌ಗಳಿಗೆ ಕೇವಲ 2 ಲಕ್ಷ ನೀಡಲು ಆದೇಶ ನೀಡಿತು.
ಹಾಗಾಗಿ ಮುಂದಿನ ತಿಂಗಳು ಸಬ್ ಜೂನಿಯರ್ ಮಟ್ಟದಲ್ಲಿ ರೋಯಿಂಗ್ ಕ್ರೀಡಾಕೂಟ ನಡೆಸಲು ಭಾರತೀಯ ರೋಯಿಂಗ್ ಸಂಸ್ಥೆ (ಆರ್‌ಎಫ್‌ಐ) ನಿರ್ಧರಿಸಿದ್ದು, ಈಗ ಸಂಸ್ಥೆ ಭಾಗವಹಿಸುವ ಆಟಗಾರರಿಂದಲೇ ಹಣ ವಸೂಲಿ ಮಾಡಲು ಮುಂದಾಗಿದೆ. ಏಳು ದಿನಗಳ ಕಾಲ ನಡೆಯುವ ಕ್ರೀಡಾ ಕೂಟಕ್ಕೆ ಪ್ರತಿ ಆಟಗಾರರು ದಿನಕ್ಕೆ # 250 ಎಂಬಂತೆ, ಒಟ್ಟು # 1750 ಪಾವತಿ ಮಾಡಬೇಕಾಗಿದೆ.  
ಇದರಿಂದ ಬೇಸತ್ತ ಆರ್‌ಎಫ್‌ಐ ಅಧ್ಯಕ್ಷೆ ರಾಜಲಕ್ಷ್ಮಿ ಸಿಂಗ್ ದೇವ್, ಪ್ರತಿಭಟನೆ ಮಾಡಲು ಮುಂದಾಗಿದ್ದು, ಈ ಕುರಿತು ಕ್ರೀಡಾ ಇಲಾಖೆ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ಪತ್ರ ಬರೆದಿದ್ದಾರೆ.
ಹಾಗಾಗಿ ಕ್ರೀಡಾ ಇಲಾಖೆಗಳು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದು, ಈಗ ಬಂದಿರುವ ಮೊದಿ ಸರ್ಕಾರ ಸುಧಾರಣೆಗೆ ಕ್ರಮ ಕೈಗೊಳ್ಳುವ ಬಗ್ಗೆ ಕ್ರೀಡಾ ಸಂಸ್ಥೆಗಳು ನಿರೀಕ್ಷೆ ಹೊಂದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement