ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಇಂದು ಇಂಗ್ಲೆಂಡ್ ಸವಾಲು

Srinivasa Murthy VN
Updated On : 2 Jun 2014, 1:09 am

ದಿ ಹೇಗ್ (ಹಾಲೆಂಡ್): ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂ ಎದುರು ಸೋಲುವ ಮೂಲಕ ವಿಶ್ವಕಪ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡುವಲ್ಲಿ ವಿಫಲರಾಗಿರುವ ಭಾರತ ತಂಡದ ಆಟಗಾರರು ತಮ್ಮ ಎರಡನೇ ಪಂದ್ಯದಲ್ಲಿ ಮೈಕೊಡವಿ ಮೇಲೇಳುವುದು ಅಗತ್ಯವಾಗಿದೆ.
ಕ್ಯುಸೆರಾ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ “G’ ಗುಂಪಿನ ತಮ್ಮ ಎರಡನೇ ಪಂದ್ಯದಲ್ಲಿ ಭಾರತ ತಂಡ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಹಿಂದಿನ ದಾಖಲೆ ನೋಡಿದರೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು 2012ರಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಮೆಲ್ಬೋರ್ನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಸೆಣಸಿದಾಗ ಭಾರತ ತಂಡ 3-1 ಗೋಲುಗಳಿಂದ ಇಂಗ್ಲೆಂಡ್ ವಿರುದ್ಧ ಜಯಗಳಿಸಿತ್ತು. ಆದರೆ, ಪರ್ತ್‌ನಲ್ಲಿ ನಡೆದಿದ ಇಂಟರ್‌ನ್ಯಾಷನಲ್ ಸೂಪರ್ ಸಿರೀಸ್ ಪಂದ್ಯದಲ್ಲಿ ಮಾತ್ರ ಇಂಗ್ಲೆಂಡ್ ತಂಡ 2-1 ಗೋಲುಗಳಿಂದ ಭಾರತದ ವಿರುದ್ಧ ಜಯಗಳಿಸಿತ್ತು.
ಇದರ ಹೊರತಾಗಿ ಜನವರಿಯಲ್ಲಿ ನಡೆದ ವಿಶ್ವ ಲೀಗ್ ಫೈನಲ್ಸ್‌ನಲ್ಲಿ ಎರಡೂ ತಂಡಗಳು ಮತ್ತೊಮ್ಮೆ ಪರಸ್ಪರ ಎದುರಾಗಿದ್ದವು. ಆಗ ಭಾರತದ ಮೇಲೆ ಪ್ರಭುವ ಸ್ಥಾಪಿಸಿದ್ದ ಇಂಗ್ಲೆಂಡ್ 2-0 ಗೋಲುಗಳಿಂದ ಜಯ ಸಂಪಾದಿಸಿತ್ತು. ಇಂಗ್ಲೆಂಡ್ ತಂಡ ನಮಗೆ ಪ್ರಬಲ ಎದುರಾಳಿಯಾಗಿದೆ. ಆದರೆ, ಉತ್ತಮ ತಂತ್ರಗಾರಿಕೆಯ ಆಟದ ಜೊತೆಗೆ ಚೆಂಡಿನ ಮೇಲೂ ಹೆಚ್ಚು ನಿಯಂತ್ರಣ ಸಾಧಿಸುವುದು ಅಗತ್ಯವಾಗಿದೆ. ಹೆಚ್ಚೆಚ್ಚು ಅವಕಾಶಗಳನ್ನು ಕಂಡುಕೊಳ್ಳುವ ಮೂಲಕ ಗೆಲವಿಗೆ ಪ್ರಯತ್ನಿಸಬೇಕಾಗಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ಟೆರ್ರಿ ವಾಲ್ಶ್ ಹೇಳಿದ್ದಾರೆ.
ವಿಶ್ವ ರ್ಯಾಂಕಿಂಗ್‌ನಲ್ಲಿ ಭಾರತ 8ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 4ನೇ ಸ್ಥಾನ ಹೊಂದಿದೆ. ನಾಳಿನ ಪಂದ್ಯಕ್ಕಾಗಿ ಭಾರತದ ಆಟಗಾರರು ಹೆಚ್ಚು ಆಶಾಭಾವನೆಯಿಂದಿದ್ದಾರೆ. ಏಕೆಂದರೆ, ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 50 ನಿಮಿಷಗಳ ಆಟ ಮುಗಿದಾಗ 2-1 ಗೋಲುಗಳಿಂದ ಮೇಲುಗೈ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧವೂ ಅದೇ ರೀತಿಯ ಪ್ರದರ್ಶನ ನೀಡುವುದರ ಜೊತೆಗೆ ಗೆಲ್ಲಲು ಉತ್ತಮ ಪ್ರಯತ್ನ ನಡೆಸಲು ಸಿದ್ಧರಾಗಿದ್ದಾರೆ.
ಇಂಗ್ಲೆಂಡ್‌ನ ರ್ಯಾಂಕಿಂಗ್ ಬಗ್ಗೆ ನಮಗೆ ಮುಖ್ಯವಲ್ಲ. ಬೆಲ್ಜಿಯಂ ವಿರುದ್ಧ ತಂಡದ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಇಲ್ಲಿ ತೋರಿದ ಪ್ರದರ್ಶನದಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದ್ದು, ಇಂಗ್ಲೆಂಡ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದ್ದೇವೆ ಎಂದು ಭಾರತ ತಂಡದ ನಾಯಕ ಸರ್ದಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ತಂಡ ಡ್ರ್ಯಾಗ್ ಫ್ಲಿಕರ್ ಆ್ಯಶ್ಲೆ ಜೈಲ್ಸ್ ಭಾರತ ತಂಡದ ಪಾಲಿಗೆ ಹೆಚ್ಚು ಅಪಾಯಕಾರಿ. ಅವರನ್ನು ತಡೆಹಿಡಿಯುವುದು ಭಾರತಕ್ಕೆ ಒಂದು ದೊಡ್ಡ ಸವಾಲಾಗಿದೆ. ಜೊತೆಗೆ ಇಂಗ್ಲೆಂಡ್‌ನ ಉಳಿದ ಆಟಗಾರರೂ ಸಹ ಉತ್ತಮ ಫಾರ್ಮ್‌ನಲ್ಲಿದ್ದು, ಸರ್ದಾರ್ ಸಿಂಗ್ ಪಡೆಗೆ ಕಠಿಣ ಸವಾಲು ನೀಡುವುದರಲ್ಲಿ ಅನುಮಾನವಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement