ಮರ್ರೆಗೆ ಪ್ರಯಾಸದ ಜಯ
ಪ್ಯಾರಿಸ್: ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಕೊನೆಗೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಇಂಗ್ಲೆಂಡ್‌ನ ಟೆನಿಸ್ ತಾರೆ ಆ್ಯಂಡಿ ಮರ್ರೆ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿನಲ್ಲಿ ಗೆಲವು ದಾಖಲಿಸಿದ್ದಾರೆ.
ಶನಿವಾರ ನಡೆಯಬೇಕಿದ್ದ ಪಂದ್ಯ ಮಂದ ಬೆಳಕಿನ ಕಾರಣ ಭಾನುವಾರಕ್ಕೆ ಮುಂದೂಡಲಾಯಿತು. ಭಾನುವಾರ ಮುಂದುವರಿದ ಪಂದ್ಯ ನಾಲ್ಕು ಗಂಟೆ ಐದು ನಿಮಿಷಗಳ ಕಾಲ ನಡೆಯುವ ಮೂಲಕ, ಮ್ಯಾರಥಾನ್ ಪಂದ್ಯವಾಯಿತು. 7ನೇ ರ್ಯಾಂಕಿಂಗ್‌ನ ಆ್ಯಂಡಿ ಮರ್ರೆ, ತಮ್ಮ ಎದುರಾಳಿ ಜರ್ಮನಿಯ 28ನೇ ರ್ಯಾಂಕಿಂಗ್ ಫೆಲಿಪ್ ಕೊಹ್ಲಿಸ್ಕೆರಿಬರ್ ಪ್ರಬಲ ಪಂದ್ಯದ ಪ್ರತಿ ಹಂತದಲ್ಲೂ ಪೈಪೋಟಿ ನೀಡಿದ್ದು, ಮರ್ರೆ ಗೆಲವು ದಾಖಲಿಸಲು ಸಾಕಷ್ಟು ಬೆವರು ಹರಿಸಬೇಕಾಯಿತು. ಅಂತಿಮವಾಗಿ ಮರ್ರೆ 3-6, 6-3, 6-3, 4-6, 12-10 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿದ ಫೆಲಿಪ್, ಮೊದಲ ಸೆಟ್‌ನಲ್ಲಿ 6-3 ಅಂತರದ ಮುನ್ನಡೆ ಸಾಧಿಸಿದರು. ನಂತರದ ಎರಡು ಸೆಟ್‌ಗಳಲ್ಲಿ ತಿರುಗಿ ಬಿದ್ದ ಮರ್ರೆ, ತಲಾ 6-3 ಅಂತರದ ಮುನ್ನಡೆ ಕಾಯ್ದುಕೊಂಡರು.ನಾಲ್ಕನೇ ಸೆಟ್‌ನಲ್ಲಿ ಮತ್ತೆ ಫೆಲಿಪ್ 6-4 ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಪಂದ್ಯ ಅಂತಿಮ ಸೆಟ್‌ಗೆ ಜಾರಿತು.
ಅಂತಿಮ ಸೆಟ್‌ನಲ್ಲಿ ಇಬ್ಬರು ಜಿದ್ದಾಜಿದ್ದಿನ ಹೋರಾಟ ನಡೆಸಿದ ಪರಿಣಾಮ, ಈ ಸೆಟ್ ಸುದೀರ್ಘ 96 ನಿಮಿಷಗಳ ಕಾಲ ನಡೆಯಿತು. ಅಂತಿಮವಾಗಿ ಮರ್ರೆ ಈ ಸೆಟ್‌ನಲ್ಲಿ 12-10ರ ಮುನ್ನಡೆಯೊಂದಿಗೆ ಪಂದ್ಯವನ್ನು ವಶಪಡಿಸಿಕೊಂಡರು.
ಮರ್ರೆ ತಮ್ಮ ಮುಂದಿನ ಪಂದ್ಯದಲ್ಲಿ 24ನೇ ರ್ಯಾಂಕಿಂಗ್‌ನ ಸ್ಪೇನ್‌ನ ಫರ್ನಾಂಡೊ ವರ್ಡಸ್ಕೊ ಅವರನ್ನು ಎದುರಿಸಲಿದ್ದಾರೆ. ಫರ್ನಾಂಡೊ ಮೂರನೇ ಸುತ್ತಿನ ಪಂದ್ಯದಲ್ಲಿ 12ನೇ ರ್ಯಾಂಕಿಂಗ್‌ನ ಫ್ರಾನ್ಸ್‌ನ ರಿಚರ್ಡ್ ಗಾಸ್ಕೆಟ್ ವಿರುದ್ಧ 6-3, 6-2, 6-3 ಸೆಟ್‌ಗಳ ಸುಲಭ ಗೆಲವು ದಾಖಲಿಸಿದರು.
ಪುರುಷರ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ತಮ್ಮ ಎದುರಾಳಿ ಅಮೆರಿಕಾದ ಜಾನ್ ಐಸ್ನರ್ ವಿರುದ್ಧ 6-4, 6-4, 6-4 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಕ್ವಾರ್ಟರ್‌ಫೈನಲ್‌ಗೆ ಸಾನಿಯಾ ಜೋಡಿ: ಭಾರತದ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜತೆಗೂಡಿ ಆಡುತ್ತಿರುವ ಸಾನಿಯಾ, ಮೂರನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಎಲೆನಾ ಯಾಂಕೊವಿಚ್ ಮತ್ತು ರಷ್ಯಾದ ಅಲಿಸಾ ಕ್ಲೆಬೊನೊವಾ ಅವರನ್ನು 6-3, 6-3 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ಆದರೆ ಭಾರತದ ಮತ್ತೊಬ್ಬ ಆಟಗಾರ ರೋಹನ್ ಬೋಪಣ್ಣ ಅವರು ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡಿದ್ದಾರೆ. ಭಾನುವಾರವೇ ನಡೆದ ಪಂದ್ಯದಲ್ಲಿ ಬೋಪಣ್ಣ ಮತ್ತು ಸ್ಲೊವೆನಿಯಾದ ಕತ್ರಿನಾ ಸ್ರೆಬಾಟ್ನಿಕ್ ಜೋಡಿ 6-2, 4-6, 5-10 ಸೆಟ್‌ಗಳಿಂದ ಜರ್ಮನಿಯ ಜೂಲಿಯಾ ಜಾರ್ಜ್ ಮತ್ತು ಸರ್ಬಿಯಾದ ನೆನಾದ್ ಜಿಮೊಂಜಿಚ್ ಜೋಡಿ ಎದುರು ತಲೆಬಾಗಿಸಿತು.