ಅಂತಾರಾಷ್ಟ್ರೀಯ ಕುಸ್ತಿ: ಯೋಗೇಶ್ವರ್‌ಗೆ ಚಿನ್ನ, ಸುಶೀಲ್‌ಗೆ ಬೆಳ್ಳಿ
ನವದೆಹಲಿ: ಭಾರತದ ಭರವಸೆಯ ಕುಸ್ತಿ ಪಟುಗಳಾದ ಯೋಗೇಶ್ವರ್ ದತ್ ಮತ್ತು ಸುಶೀಲ್ ಕುಮಾರ್ ಅವರು ಇಟಲಿಯ ಸಸಾರಿ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಲಂಡನ್ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್, 65 ಕೆ.ಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಇನ್ನು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತರಾಗಿರುವ ಸುಶೀಲ್‌ಕುಮಾರ್ 74 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
2012ರ ಲಂಡನ್ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ಭಾರತದ ಕುಸ್ತಿ ಪಟುಗಳು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದಂತಾಗಿದೆ.
ಗ್ಲಾಸ್ಗೊದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಆರಂಭಕ್ಕೆ ಇನ್ನು 50 ದಿನಗಳಷ್ಟೇ ಉಳಿದಿದ್ದು, ಇಲ್ಲಿನ ಪ್ರದರ್ಶನ ಯೋಗೇಶ್ವರ್ ಮತ್ತು ಸುಶೀಲ್‌ಕುಮಾರ್ ಅವರಲ್ಲಿ ಸ್ಫೂರ್ತಿ ತುಂಬಿದಂತಾಗಿದೆ.