ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಉಪಾಂತ್ಯಕ್ಕೆ ಶರಪೋವಾ
ಪ್ಯಾರಿಸ್: ರಷ್ಯಾದ ಟೆನಿಸ್ ತಾರೆ ಮಾರಿಯಾ ಶರಪೋವಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಉತ್ತಮ ಅಭಿಯಾನ ಮುಂದುವರಿಸಿದ್ದು, ಮಂಗಳವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಗೆಲವು ದಾಖಲಿಸಿದ್ದಾರೆ. ಈ ವಿಜಯದೊಂದಿಗೆ ಶರಪೋವಾ ಉಪಾಂತ್ಯ ಹಂತಕ್ಕೆ ಪ್ರವೇಶಿಸಿದ್ದಾರೆ.
ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಹೋರಾಟದ ಪ್ರದರ್ಶನ ನೀಡಿದ ಮಾರಿಯಾ ಶರಪೋವಾ, ತಮ್ಮ ಎದುರಾಳಿ ಸ್ಪೇನ್ನ ಗಾರ್ಬಿನ್ ಮುಗುರುಜಾ ವಿರುದ್ಧ 1-6, 7-5, 6-1 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಮಣಿದ ಮಿರ್ಜಾ ಜೋಡಿ: ಭಾರತದ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆ ಜತೆಗಾರ್ತಿ ಕಾರಾ ಬ್ಲ್ಯಾಕ್, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದಾಗ್ಯೂ, ಸಾನಿಯಾ ಮಿರ್ಜಾ ಹಾಗೂ ಕಾರಾ ಬ್ಲ್ಯಾಕ್ ಜೋಡಿಯು, ತಮ್ಮ ಎದುರಾಳಿ ಜೋಡಿಯಾದ ಚೀನಾದ ಶುಯ್ ಪೆಂಗ್ ಹಾಗೂ ತೈಪೇನ ಸು ವೇ ಹೆಯ್ ವಿರುದ್ಧ 2-6, 6-3, 3-6 ಸೆಟ್ಗಳ ಅಂತರದಿಂದ ಪರಾಭವಗೊಂಡಿತು.