ಶ್ರೀಕಾಂತ್, ಕಶ್ಯಪ್ಗೆ ದೊಡ್ಡ ಶಾಕ್
ಟೋಕಿಯೊ: ತವರಿನ ಯುವ ಪ್ರತಿಭೆ ತಾನ್ವಿ ಲಾಡ್ ಅಚ್ಚರಿಯ ಫಲಿತಾಂಶದೊಂದಿಗೆ ಮಹಿಳೆಯರ ಸಿಂಗಲ್ಸ್ನಲ್ಲಿ ಭರ್ಜರಿಯಾಗಿ ಶುಭಾರಂಭ ಮಾಡಿದ್ದರೆ, ಪುರುಷರ ವಿಭಾಗದಲ್ಲಿ ಅಗ್ರಮಾನ್ಯ ಆಟಗಾರರಾದ ಕೆ. ಶ್ರೀಕಾಂತ್ ಮತ್ತು ಪರುಪಳ್ಳಿ ಕಶ್ಯಪ್ ಇಬ್ಬರೂ ಮೊದಲ ಸುತ್ತಿನಲ್ಲಿಯೇ ಸೋಲನುಭವಿಸಿ ಹೊರನಡೆದಿದ್ದಾರೆ. ಹಾಗಾಗಿ, 2,50,000 ಡಾಲರ್ ಬಹುಮಾನ ಮೊತ್ತದ ಜಪಾನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಆರಂಭದಲ್ಲಿ ಸಿಹಿಗಿಂತಲೂ ಕಹಿಯೇ ಹೆಚ್ಚಾಗಿದೆ.
ವಿಶ್ವದ 59ನೇ ಶ್ರೇಯಾಂಕಿತೆ ತಾನ್ವಿ ಲಾಡ್ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ 18ನೇ ಶ್ರೇಯಾಂಕಿತೆ ಸ್ಕಾಟ್ಲೆಂಡ್ನ ಕರ್ಸ್ಟಿ ಗಿಲ್ಮೋರ್ ವಿರುದ್ಧ 13-21, 21-11, 21-17 ಅಂಕಗಳಿಂದ ಗೆಲವು ದಾಖಲಿಸಿದರು.
ಒಂದು ಗಂಟೆಗೂ ಹೆಚ್ಚು ಅವಧಿಯವರೆಗೆ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯು ತನಗಿಂತಲೂ ಉನ್ನತ ಕ್ರಮಾಂಕದ ಆಟಗಾರ್ತಿಯ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸುವ ಮೂಲಕ ಎದುರಾಳಿಗೆ ಭಾರಿ ಶಾಕ್ ನೀಡಿದರು.
ಕಳೆದ ವರ್ಷ ಸ್ವಿಜರ್ಲೆಂಡ್ನಲ್ಲಿ ನಡೆದ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಅಂತಾರಾಷ್ಟ್ರೀಯ ಟೂರ್ನಿಯೊಂದರಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ್ದ ತಾನ್ವಿ, ಮುಂದಿನ ಸುತ್ತಿನ ಪಂದ್ಯದಲ್ಲಿ ಲಿಯು ಜಿನ್ ಅವರನ್ನೆದುರಿಸಲಿದ್ದಾರೆ.
ಈ ಮಧ್ಯೆ ಯುವ ಆಟಗಾರ ಸೌರಭ್ ವರ್ಮಾ ಕೂಡ ತಮ್ಮ ಆರಂಭಿಕ ಸೆಣಸಿನಲ್ಲಿ ಹಾಂಕಾಂಗ್ನ ನ್ಯಾನ್ ವೀ ಅವರನ್ನು 19-21, 21-14, 22-20ರಿಂದ ಪರಾಭವಗೊಳಿಸಿ ಮುನ್ನಡೆ ಸಾಧಿಸಿದರು.
ಆದರೆ, ತೀರ ನಿರಾಶಾದಾಯಕ ಫಲಿತಾಂಶವೆಂದರೆ ತವರಿನ ಅಗ್ರಮಾನ್ಯ ಆಟಗಾರರಾದ ಕೆ.ಶ್ರೀಕಾಂತ್ ಮತ್ತು ಕಶ್ಯಪ್ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿದ್ದು. ಶ್ರೀಕಾಂತ್ ತಮ್ಮ ಪಂದ್ಯದಲ್ಲಿ ಜರ್ಮನಿಯ ಮಾರ್ಕ್ ಜ್ವೆಬ್ಲೆರ್ ಎದುರು 21-18, 13-21, 8-21ರಿಂದ ಸೋಲನುಭವಿಸಿದರು. ಅದೇ ರೀತಿ ಕಶ್ಯಪ್, 21-15, 23-25, 18-21ರಿಂದ ರಿಚಿ ಟಾಕೆಶಿಟಾ ವಿರುದ್ಧ ಆಘಾತಗೊಂಡರು.
ಮತ್ತೊಂದು ಪಂದ್ಯದಲ್ಲಿ ಆರ್ಎಂವಿ ಗುರುಸಾಯಿದತ್ 10-21, 21-15, 13-21ರಿಂದ ಜಪಾನಿನ ಟಾಕುಮಾ ಉಯೆಡಾ ಎದುರು ತಲೆಬಾಗಿಸಿದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮಾತ್ರ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ 21-18, 21-16ರಿಂದ ಜಪಾನಿನ ಅಯಾನೆ ಕುರಿಹರ ಮತ್ತು ನಾರು ಶಿನಾಯ್ ವಿರುದ್ಧ ಜಯಗಳಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಜ್ವಾಲಾ ಮತ್ತು ಅಶ್ವಿನಿ ಎರಡೂ ಗೇಮ್ಗಳಲ್ಲಿ ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಹ ಭಾರತದ ಜೋಡಿಯಾದ ತರುಣ್ ಕೋನಾ ಮತ್ತು ಅಶ್ವಿನಿ ಪೊನ್ನಪ್ಪ ಅವರು 18-21, 21-18, 21-17ರಿಂದ ಜರ್ಮನಿಯ ಪೀಟರ್ ಕೇಸಬಾಯೆರ್ ಮತ್ತು ಇಸಾಬೆಲ್ ಹೆರ್ಟರಿಚ್ ವಿರುದ್ಧ ಜಯಗಳಿಸಿ ಎರಡನೇ ಸುತ್ತು ತಲುಪಿದರು.