ಏಷ್ಯಾ ಸ್ಕ್ವಾಷ್ ಚಾಂಪಿಯನ್‌ಶಿಪ್: ಸೆಮಿಫೈನಲ್‌ಗೆ ಭಾರತ ಲಗ್ಗೆ
ಹಾಂಕಾಂಗ್: ಸಿಂಗಾಪುರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಭಾರತ ಪುರುಷರ ತಂಡ ಮತ್ತು ತಮ್ಮ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಭಾರತ ವನಿತೆಯರ ತಂಡಗಳು ಏಷ್ಯನ್ ಸ್ಕ್ವಾಷ್ ತಂಡ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪ್ರವೇಶಿಸಿವೆ.ಏಷ್ಯಾದ ನಂಬರ್ 1 ಆಟಗಾರ ಸೌರವ್ ಘೋಸಾಲ್ ಮತ್ತು ಹರಿಂದರ್ ಪಾಲ್ ಸಂಧು ಅವರು ಸಿಂಗಾಪುರ ವಿರುದ್ಧ ನಡೆದ ಮೊದಲೆರಡು ಸಿಂಗಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.ತಮ್ಮ ಮೊದಲ ಏಷ್ಯನ್ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿರುವ ಪುರುಷರ ತಂಡ, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮಲೇಷ್ಯಾ ವಿರದ್ಧ ಸೆಣಸಲಿದೆ. ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ತಂಡ ಹಾಂಕಾಂಗ್ ವಿರುದ್ಧ ಶುಕ್ರವಾರವೇ ನಡೆದ ಪಂದ್ಯದಲ್ಲಿ 2-0 ಅಂತರದಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.ಇನ್ನು ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಭಾರತ ವನಿತೆಯರ ತಂಡ, ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಮಲೇಷ್ಯಾ ವಿರುದ್ಧ ಸೆಣಸಲಿದೆ. ಆತಿಥೇಯ ತಂಡ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.ವಿಶ್ವದ ನಂಬರ್ 10 ಆಟಗಾರ್ತಿ ದೀಪಿಕಾ ಪಳ್ಳಿಕಲ್, ಜೋಶ್ನಾ ಚಿನ್ನಪ್ಪ ಹಾಗೂ ಅನಕಾ ಅಲಂಕಾಮೋನಿ ಅವರು ವಿಶ್ವದ ನಂಬರ್ 1 ಆಟಗಾರ್ತಿ ನಿಕೋಲ್ ಡೇವಿಡ್ ಮತ್ತು 7ನೇ ರ್ಯಾಂಕಿಂಗ್ ಆಟಗಾರ್ತಿ ಲೋ ವೀ ವೆರ್ನ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಶುಕ್ರವಾರ ನಡೆದ ಪಂದ್ಯಗಳಲ್ಲಿ ಭಾರತ ವನಿತೆಯರು ಚೀನಾ ಮತ್ತು ಪಾಕಿಸ್ತಾನ ತಂಡಗಳನ್ನು ಸೋಲಿಸಿದರು.