ರೂಟ್ ಚೊಚ್ಚಲ ದ್ವಿಶತಕ, ಇಂಗ್ಲೆಂಡ್ ಬೃಹತ್ ಮೊತ್ತ
ಲಾರ್ಡ್ಸ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜೋ ರೂಟ್ ದಾಖಲಿಸಿದ ಚೊಚ್ಚಲ ದ್ವಿಶತಕ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 575 ರನ್‌ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ದಿನದಾಟ ನಿಂತಾಗ ಇಂಗ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 344 ರನ್‌ಗಳಿಸಿತ್ತು. ಆಗ ಆಟ ನಿಂತಾಗ ಜೋ ರೂಟ್ 102 ರನ್‌ಗಳಿಸಿ ಅಜೇಯರಾಗುಳಿದಿದ್ದರು. ಇಂದು ಎರಡನೇ ದಿನದಾಟ ಮುಂದುವರಿಸಿದ
ಇಂಗ್ಲೆಂಡ್ ತಂಡಕ್ಕೆ ಮತ್ತೆ ರೂಟ್ ಆಸರೆಯಾದರು. ಐದನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ಅವರು ಬರೋಬ್ಬರಿ ದ್ವಿಶತಕ ಪೂರೈಸುತ್ತಿದ್ದಂತೆಯೇ ಇಂಗ್ಲೆಂಡ್ ನಾಯಕ ಅಲಸ್ಟರ್ ಕುಕ್ ನಿವೃತ್ತಿ ಘೋಷಿಸಿದರು.
ಅಂತಿಮವಾಗಿ ರೂಟ್ 496 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದು, 298 ಎಸೆತಗಳಲ್ಲಿ 16 ಬೌಂಡರಿಗಳಿದ್ದ ಅಜೇಯ 200 ರನ್ ಸಂಪಾದಿಸಿದರು. ಇದು ರೂಟ್‌ಗೆ 16ನೇ ಪಂದ್ಯದಲ್ಲಿ ದೊರೆತ ಮೊದಲ ದ್ವಿಶತಕ ಹಾಗೂ ವೈಯಕ್ತಿಕ ಗರಿಷ್ಠ ಮೊತ್ತ ಸಹ ಆಗಿದೆ. ಇದಕ್ಕೆ ಮುನ್ನ ಅವರು 180 ರನ್‌ಗಳಿಸಿದ್ದು ವೈಯಕ್ತಿಕ ಉತ್ತಮ ಸಾಧನೆಯಾಗಿತ್ತು.
ಕೆಳಕ್ರಮಾಂಕದಲ್ಲಿ ಇವರಿಗೆ ಉತ್ತಮ ಬೆಂಬವಲ ನೀಡಿದ ವಿಕೆಟ್ ಕೀಪರ್ ಮ್ಯಾಟ್ ಪ್ರಯರ್ 86 ರನ್‌ಗಳ ಕಾಣಿಕೆ ನೀಡಿದರು.
ಶ್ರೀಲಂಕಾ ಪರ ಉತ್ತಮ ದಾಳಿ ನಡೆಸಿದ ನುವಾನ್ ಪ್ರದೀಪ್ 4 ಹಾಗೂ ಶಮಿಂಡ ಎರಂಗ 3 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನಿಂಗ್ಸ್ 130.3 ಓವರುಗಳಲ್ಲಿ 9 ವಿಕೆಟ್‌ಗೆ 575 (ಜೋ ರೂಟ್ ಅಜೇಯ 200, ಮ್ಯಾಟ್ ಪ್ರಯರ್ 86, ಸ್ಟುವರ್ಟ್ ಬ್ರಾಡ್ 39, ಲಿಯಂ ಪ್ಲಂಕೆಟ್ 39, ನುವಾನ್ ಪ್ರದೀಪ್ 123ಕ್ಕೆ4, ಶಮಿಂಡ ಎರಂಗ 163ಕ್ಕೆ3).